ಡೆಲ್ಲಿ ವೇಗದ ಬೌಲರ್ ಹರ್ಷಲ್ ಪಟೇಲ್ ಐಪಿಎಲ್‌ಗೆ ಅಲಭ್ಯ

Update: 2019-04-12 03:14 GMT

ಕೋಲ್ಕತಾ, ಎ.11: ಬಲಕೈಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಈಗ ನಡೆಯುತ್ತಿರುವ ಐಪಿಎಲ್ ಟಿ-20 ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ ಎಂದು ಕೋಚ್ ರಿಕಿ ಪಾಂಟಿಂಗ್ ಗುರುವಾರ ತಿಳಿಸಿದ್ದಾರೆ.

  ‘‘ಎ.1ರಂದು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಪಂದ್ಯದ ವೇಳೆ ಪಟೇಲ್ ಕೈಗೆ ಗಾಯವಾಗಿತ್ತು. ಅವರು ಎಕ್ಸ್‌ರೇಗೆ ಒಳಗಾಗಿದ್ದು, ಇನ್ನು ಎರಡರಿಂದ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.ಹೀಗಾಗಿ ಅವರು ಟೂರ್ನಮೆಂಟ್‌ನಿಂದ ಹೊರಗುಳಿಯಲಿದ್ದಾರೆ. ಅವರ ಬದಲಿ ಆಟಗಾರನನ್ನು ಶೀಘ್ರವೇ ಆಯ್ಕೆ ಮಾಡುತ್ತೇವೆ’’ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 ಪಟೇಲ್ ಡೆಲ್ಲಿ ಮೂಲದ ತಂಡದ ಪರ 6 ಪಂದ್ಯಗಳ ಪೈಕಿ ಎರಡರಲ್ಲಿ ಆಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಟೈ ಆಗಿದ್ದ ಪಂದ್ಯದಲ್ಲಿ 40 ರನ್‌ಗೆ 2 ವಿಕೆಟ್ ಪಡೆದಿದ್ದರು. ಆ ಪಂದ್ಯವನ್ನು ಡೆಲ್ಲಿ ತಂಡ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿತ್ತು. ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ 14 ರನ್‌ನಿಂದ ಸೋತ ಪಂದ್ಯದಲ್ಲಿ ಒಂದೂ ವಿಕೆಟ್ ಪಡೆಯದೇ 37 ರನ್ ಬಿಟ್ಟುಕೊಟ್ಟಿದ್ದರು. ಎಡಗೈ ಅಗ್ರ ಕ್ರಮಾಂಕದ ದಾಂಡಿಗ ಮನ್‌ಜೋತ್ ಕಾರ್ಲಾ ಬಲಗೈಗೆ ಗಾಯವಾಗಿದ್ದರೂ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಈ ತನಕ ಟೂರ್ನಿಯಲ್ಲಿ ಮಿಶ್ರ ಫಲಿತಾಂಶ ದಾಖಲಿಸಿದೆ. ತಾನಾಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಜಯ ಹಾಗೂ ಇನ್ನೂ 3ರಲ್ಲಿ ಸೋಲುಂಡಿದೆ. ಶುಕ್ರವಾರ ಕೆಕೆಆರ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News