ದೇಶಪ್ರೇಮದ ಬಗ್ಗೆ ಮಾತನಾಡುವ ಮೋದಿ ಪಾಕಿಸ್ತಾನಕ್ಕೆ ಹೋಗಿದ್ದೇಕೆ: ಬಿ.ಕೆ.ಹರಿಪ್ರಸಾದ್ ಪ್ರಶ್ನೆ

Update: 2019-04-12 14:11 GMT

ಬೆಂಗಳೂರು, ಎ.12: ಪ್ರಧಾನಿ ಮೋದಿ ಐದು ವರ್ಷಗಳ ಸಾಧನೆ ಶೂನ್ಯ. ಸಂವಿಧಾನ ಬದಲಿಸುವ ಮಾತುಗಳನ್ನು ಆಡಿದ್ದಾರೆ. ದೇಶಪ್ರೇಮದ ಬಗ್ಗೆ ದೊಡ್ಡ- ದೊಡ್ಡ ಹೇಳಿಕೆಗಳನ್ನು ನೀಡುತ್ತಿರುವ ಪ್ರಧಾನಿ ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಏಕೆ ಹೋಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಶುಕ್ರವಾರ ಜಯನಗರ, ವಿಜಯನಗರ ಹಾಗೂ ಗೋಂದರಾಜನಗರ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಹರಿಪ್ರಸಾದ್, ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸುವ ಕೋಮುವಾದಿ ಪಕ್ಷಕ್ಕೆ ಸರಿಯಾದ ಪಾಠವನ್ನು ಕಲಿಸುವ ಅವಕಾಶ ಬಂದಿದೆ ಎಂದು ಹೇಳಿದರು.

ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ದೇಶದ ಚೌಕಿದಾರ ಎನ್ನುವ ಬಿರುದನ್ನು ಸ್ವತಃ ಕೊಟ್ಟುಕೊಂಡಿದ್ದಾರೆ. ಐಟಿ ಹಾಗೂ ಇಡಿ ಅಧಿಕಾರಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿರುವ ಈ ಚೌಕಿದಾರರಿಗೆ ಸರಿಯಾದ ಪಾಠ ಕಲಿಸುವುದಕ್ಕೆ ಉತ್ತಮ ಅವಕಾಶ ಎಂದು ಹೇಳಿದರು.

ಬೆಂಗಳೂರು ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವುದೇ ಮಾತುಗಳನ್ನು ಆಡದೇ ಇರುವ ಪ್ರಧಾನಿ ಕೇವಲ ಸೈನಿಕರು ಹಾಗೂ ರೈತರ ಮೇಲೆ ಮತ ಯಾಚಿಸುತ್ತಿದ್ದಾರೆಂದ ಅವರು, ನಗರದ ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಪ್ರಿಯಾಕೃಷ್ಣ ಮಾತನಾಡಿ, ಜಾತಿ-ಧರ್ಮಗಳ ಮಧ್ಯೆ ಸಾಮರಸ್ಯ ಹಾಗೂ ಅವುಗಳ ಅಭಿವೃದ್ದಿಗೆ ಶ್ರಮಿಸುವ ಪಕ್ಷ ಕಾಂಗ್ರೆಸ್ ಪಕ್ಷ. ನಮ್ಮ ಪಕ್ಷದಿಂದ ಅನುಭವಿ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಈ ಬಾರಿ ದಕ್ಷಿಣ ಕ್ಷೇತ್ರದಲ್ಲಿ ಪರಿಸ್ಥಿತಿಗಳು ಬದಲಾಗಿವೆ. ಬದಲಾಗಿರುವ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಒಗ್ಗಟ್ಟಿನಿಂದ ಬಳಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ನಾಯಕರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು ನಮ್ಮ ಅಭ್ಯರ್ಥಿ ಗೆಲವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಗಂಗೊಂಡನಹಳ್ಳಿಯ ಮಕ್ಕಾ ಮಸ್ಜಿದ್‌ಗೆ ಸೇರಿದಂತೆ ಮೂರು ಮಸೀದಿಗಳಿಗೆ ಭೇಟಿ ನೀಡಿ ಮುಸ್ಲಿಮ್ ಬಾಂಧವರೊಂದಿಗೆ ಪ್ರಾರ್ಥನೆ ಸಲ್ಲಿಸಿ ಮತಯಾಚಿಸಿದರು. ಈ ವೇಳೆ ಶಾಸಕಿ ಸೌಮ್ಯ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News