ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮಹಿಳಾ ವಿರೋಧಿ: ಶಾಸಕಿ ಸೌಮ್ಯಾರೆಡ್ಡಿ

Update: 2019-04-12 14:28 GMT

ಬೆಂಗಳೂರು, ಎ.12: ಮಹಿಳಾ ವಿರೋಧಿಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯನಿಗೆ ಯಾಕೆ ಮತ ಹಾಕಬೇಕೆಂದು ಯುವತಿಯರು ಪ್ರಶ್ನಿಸಬೇಕೆಂದು ಶಾಸಕಿ ಸೌಮ್ಯಾರೆಡ್ಡಿ ತಿಳಿಸಿದರು.

ಜಯನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಂದಿಗೆ ಸಂವಾದ ನಡೆಸಿದ ಅವರು, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮಹಿಳೆ ಹಾಗೂ ಸಂವಿಧಾನದ ವಿರುದ್ದವಾಗಿ ಮಾತನಾಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇರಳವಾಗಿ ಸಿಗುತ್ತಿದೆ. ಮಹಿಳೆಯರ ಬಗ್ಗೆ ಕನಿಷ್ಟವಾಗಿ ಚಿಂತಿಸುವ ವ್ಯಕ್ತಿಯೊಬ್ಬರು ಜನಪ್ರತಿನಿಧಿಗಳು ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಭಾರತ ನೂರಾರು ಜಾತಿ, ಹತ್ತಾರು ಧರ್ಮ, ಭಾಷೆಗಳಿಂದ ಕೂಡಿರುವ ದೇಶವಾಗಿದೆ. ಇಲ್ಲಿ ಎಲ್ಲರನ್ನು ಮಾನವೀಯತೆಯಿಂದ ಸೌಹಾರ್ದತೆಯಿಂದ ನೋಡುವಂತಹ ಮನಸು ಜನಪ್ರತಿನಿಧಿಗಳಿಗೆ ಇರಬೇಕು. ಆದರೆ, ಬಿಜೆಪಿ ನಾಯಕರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜಾತಿ, ಧರ್ಮಗಳ ಮಧ್ಯೆ ದ್ವೇಷ ಬಿತ್ತುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವಷ್ಟು ಮಹತ್ವವನ್ನು ಪಡೆದುಕೊಂಡಿದೆ. ಹೀಗಾಗಿ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತಹ ಶಕ್ತಿ ಹೊಂದಿರುವಂತಹ ಕಾಂಗ್ರೆಸ್‌ನತ್ತ ಜನತೆ ಒಲವು ತೋರುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News