ಸೊಸೆಯರು-ಮೊಮ್ಮಕ್ಕಳು ಇದ್ದರೆ ಮಾತ್ರ ಕುಟುಂಬ ರಾಜಕಾರಣ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

Update: 2019-04-12 14:39 GMT

ಹುಬ್ಬಳ್ಳಿ, ಎ. 12: ಅಪ್ಪ-ಮಕ್ಕಳು ಸೇರಿ ಕುಟುಂಬದಲ್ಲಿ ಒಬ್ಬರು ಇಬ್ಬರು ರಾಜಕಾರಣದಲ್ಲಿ ಇರಬಹುದು. ಆದರೆ. ಸೊಸೆಯರು, ಮೊಮ್ಮಕ್ಕಳು ಇದ್ದರೆ ಮಾತ್ರ ಅದು ಕುಟುಂಬ ರಾಜಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ಲೇಷಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ರಾಜ್ಯದಲ್ಲಿ ಪಕ್ಷಕ್ಕೆ ಬಹುಮತ ಬರುತ್ತದೋ ಅಲ್ಲಿ ಸ್ವತಂತ್ರ ಸರಕಾರ ಮಾಡುತ್ತೇವೆ. ಬರದಿದ್ದಾಗ ಉಳಿದ ಪಕ್ಷಗಳೊಂದಿಗೆ ಸೇರಿ ಸರಕಾರ ರಚಿಸುತ್ತೇವೆ ಎಂದರು.

ಐಟಿ ದಾಳಿ ಬಗ್ಗೆ ಮೊದಲೇ ಮಾಹಿತಿ ಬಹಿರಂಗಪಡಿಸಿದ ಸಿಎಂ ಕುಮಾರಸ್ವಾಮಿ ಗೌಪ್ಯತೆ ಉಲ್ಲಂಘಿಸಿದ್ದಾರೆ. ಮೊದಲೇ ಮಾಹಿತಿ ಸಿಕ್ಕ ಕಾರಣ ಸಾವಿರಾರು ಕೋಟಿ ರೂ. ಬೇರೆಡೆಗೆ ಸಾಗಿಸಲಾಯಿತು. ಪುಲ್ವಾಮ ದಾಳಿ ಮಾಹಿತಿ ಮೊದಲೇ ಇತ್ತು ಎಂಬ ಹೇಳಿಕೆ ಸಂವಿಧಾನ ವಿರೋಧಿ. ಮುಖ್ಯಮಂತ್ರಿಯಾದವರು ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ 22 ಸೀಟು ಗೆಲ್ಲುತ್ತೇವೆ ಎಂಬ ರೇವಣ್ಣ ಅವರು ನಿಂಬೆಹಣ್ಣು ಹಿಡಿದು ಭವಿಷ್ಯ ಹೇಳಿದರೆ ಅದು ನಿಜವಾಗಲ್ಲ ಎಂದ ಅವರು, ಕಾಂಗ್ರೆಸ್-ಜೆಡಿಎಸ್ ನಾಯಕರ ಮನಸ್ತಾಪ ತೀವ್ರವಾಗುತ್ತಿದ್ದು, ಸರಕಾರದ ಆಯಸ್ಸು ಮುಗಿಯುತ್ತಿದೆ ಎಂದು ನುಡಿದರು.

ಲೋಕಸಭಾ ಚುನಾವಣೆಯ ನಂತರ ಸರಕಾರ ಇರುವುದಿಲ್ಲ. ಮಂಡ್ಯದಲ್ಲಿ ಸುಮಲತಾ ಅವರು ಗೆಲುವು ಖಚಿತವಾಗಿರುವುದರಿಂದ ಜೆಡಿಎಸ್ ಮುಖಂಡರು ಹತಾಶರಾಗಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರು.

ಸಂತೋಷ್ ಪ್ರಶ್ನೆಗೆ ಗೋಷ್ಠಿ ಮುಕ್ತಾಯ: ‘ಟಿಕೆಟ್ ನೀಡುವ ವೇಳೆ ಡಿಎನ್‌ಎ ನೋಡಲು ಆಗುವುದಿಲ್ಲ’ ಎಂಬ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಬದಲು ಬಿಎಸ್‌ವೈ ಸುದ್ದಿಗೋಷ್ಠಿಯನ್ನೆ ಮುಕ್ತಾಯಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News