ಮೈತ್ರಿ ಸರಕಾರ ಐದು ವರ್ಷದ ಆಡಳಿತ ಪೂರ್ಣಗೊಳಿಸಲ್ಲ: ಡಿವಿಎಸ್

Update: 2019-04-12 15:16 GMT

ಬೆಂಗಳೂರು, ಎ.12: ನಾವು ಆಪರೇಷನ್ ಕಮಲ ನಡೆಸದಿದ್ದರೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಯಾವುದೇ ಕಾರಣಕ್ಕೂ ಐದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸುವುದಿಲ್ಲ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದರು.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರವು ನೀವು ಆಪರೇಷನ್ ಕಮಲ ನಡೆಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸ್ವಯಂಕೃತ ಅಪರಾಧದಿಂದಲೇ ಸರಕಾರ ಪತನವಾಗುತ್ತದೆ ಎಂದು ಉತ್ತರಿಸಿದರು.

ಬಿಜೆಪಿ ಆಪರೇಷನ್ ಕಮಲ ನಡೆಸುತ್ತದೆ ಎಂಬುದು ಕಾಂಗ್ರೆಸ್-ಜೆಡಿಎಸ್ ಸರಕಾರದ ಆರೋಪ. ಮೈತ್ರಿ ಸರಕಾರದ ಶಾಸಕರೇ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯುವುದನ್ನು ಎದುರು ನೋಡುತ್ತಿದ್ದಾರೆ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ದೋಸ್ತಿ ಪಕ್ಷಗಳು ಎಷ್ಟರಮಟ್ಟಿಗೆ ಒಂದಾಗಿವೆ ಎಂಬುದು ಲೋಕಸಭಾ ಚುನಾವಣೆಯಲ್ಲೇ ಜಗಜ್ಜಾಹೀರಾಗಿದೆ. ಹಾವು ಮುಂಗುಸಿಯಂತಿರುವ ಕಾಂಗ್ರೆಸ್- ಜೆಡಿಎಸ್ ನಾಯಕರು ವಿಧಾನಸೌಧದದಲ್ಲಿ ಮಾತ್ರ ದೋಸ್ತಿಯಾಗಿದ್ದರೂ ಹಾದಿಬೀದಿಯಲ್ಲಿ ಈಗಲೂ ವಾಗ್ವಾದ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸಾರಥ್ಯವನ್ನು ಯಾರಿಗೆ ನೀಡಬೇಕು ಎಂಬುದು ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ. ಸದ್ಯಕ್ಕೆ ಯಡಿಯೂರಪ್ಪನವರು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ದೇಶವೇ ಮೊದಲು ಎಂಬುದು ನಮ್ಮ ಕಲ್ಪನೆ. ಇದನ್ನೇ ನಮ ಪ್ರಣಾಳಿಕೆಯಲ್ಲೂ ಸೇರ್ಪಡೆ ಮಾಡಿದ್ದೇವೆ. ದೇಶ ಮೊದಲು ಆಮೇಲೆ ನಾವು. ಇದು 130 ಕೋಟಿ ಜನರ ಆಶಯವೂ ಹೌದು ಎಂದರು.

ರಾಜ್ಯಕ್ಕೆ ಕಾವೇರಿಯ 10 ಟಿಎಂಸಿ ನೀರು ಹೆಚ್ಚು ಸಿಗುವಂತೆ ನೋಡಿಕೊಳ್ಳುವಲ್ಲಿ ನನ್ನ ಪಾತ್ರ ಎಷ್ಟಿದೆ ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಬೆಂಗಳೂರಿಗೆ 4 ಟಿಎಂಸಿ ಹೆಚ್ಚು ನೀರು ಸಿಗುವಂತೆ ಕೆಲಸ ಮಾಡಿದ್ದೇನೆ.

-ಡಿ.ವಿ.ಸದಾನಂದಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News