ಪತ್ರಕರ್ತ ಮೆಹಬೂಬ್ ಗಡಿಪಾರು: ಗೃಹ ಸಚಿವರ ಮಧ್ಯ ಪ್ರವೇಶಕ್ಕೆ ಎಸ್‌ಡಿಪಿಐ ಆಗ್ರಹ

Update: 2019-04-12 15:22 GMT

ಬೆಂಗಳೂರು, ಎ. 12: ಪತ್ರಕರ್ತ, ಜನಪರ ಹೋರಾಟಗಾರ ಮಲ್ನಾಡ್ ಮೆಹಬೂಬ್ ಅವರ ಗಡಿಪಾರು ಆದೇಶವನ್ನು ಮರುಪರಿಶಿಲಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.

ಯಾವುದೇ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣವನ್ನು ಹೊಂದಿರದ ಮೆಹಬೂಬ್ ಅವರನ್ನು ರೌಡಿ ಪಟ್ಟಿಗೆ ಸೇರ್ಪಡಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಮತ್ತು ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಇದು ಶೋಷಿತರ ಪರವಿರುವ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ದೂರಿದ್ದಾರೆ.

ಮಲ್ನಾಡ್ ಮೆಹಬೂಬ್ ಅವರ ವಿವಿಧ ಜನಪರ ಹೋರಾಟಗಳು, ಅನ್ಯಾಯದ ವಿರುದ್ಧ ಧ್ವನಿಯಾದ ಸಂದರ್ಭಗಳಲ್ಲಿ ಹೋರಾಟಗಾರರ ಮೇಲೆ ದಾಖಲಾಗುವ ಪ್ರಕರಣದಂತೆ ಮೆಹಬೂಬ್ ಅವರ ಮೇಲೂ ಕೇಸು ದಾಖಲಾಗಿದೆಯೇ ಹೊರತು ಇನ್ನಿತರ ಯಾವುದೇ ಕ್ರಿಮಿನಲ್ ಪ್ರಕರಣವನ್ನು ಹೊಂದಿಲ್ಲ. ದಾಖಲಾಗಿರುವ ಪ್ರಕರಣಗಳೂ ದುರುದ್ದೇಶದಿಂದಾಗಿತ್ತು ಎಂಬುವುದು ಗಮನಾರ್ಹ. ಗಡಿಪಾರು ಆದೇಶದ ಹಿಂದೆ ಕೋಮುವಾದಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಎಂ.ಬಿ.ಪಾಟೀಲ್ ಕೂಡಲೇ ಮಧ್ಯೆಪ್ರವೇಶಿಸಿ ಪ್ರಕರಣವನ್ನು ಮರು ಪರಿಶೀಲಿಸಿ, ರೌಡಿಪಟ್ಟಿಯಿಂದ ತೆರವುಗೊಳಿಸಿ, ಗಡಿಪಾರು ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News