×
Ad

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

Update: 2019-04-12 21:56 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.12: ಸಾಹಸ ಸಿಂಹ, ನಟ ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ ವಿವಾದ ಕೊನೆಗೂ ಬರೆಹರಿದಿದ್ದು, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್ ಗ್ನೀನ್ ಸಿಗ್ನಲ್ ನೀಡಿದೆ. 

ಮೈಸೂರು ತಾಲೂಕು ಉದ್ಬೂರು ಸಮೀಪ ವಿಷ್ಣುವರ್ಧನ್ ಸ್ಮಾರಕಕ್ಕೆ ಜಿಲ್ಲಾಡಳಿತ ಸ್ಥಳ ನಿಗದಿ ಮಾಡಿತ್ತು. ಜಿಲ್ಲಾಡಳಿತವು ಸ್ಮಾರಕಕ್ಕೆ ನೀಡಿದ್ದ ಭೂಮಿಗೆ ಸಂಬಂಧಪಟ್ಟಂತೆ ಸ್ಮಾರಕ ನಿರ್ಮಾಣ ರದ್ದು ಕೋರಿ ಮಹದೇವಮ್ಮ ಹಾಗೂ ಕೆಲ ಗ್ರಾಮಸ್ಥರು ಮೈಸೂರಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿಯ ನ್ಯಾಯಾಲಯವು ಸ್ಮಾರಕ ನಿರ್ಮಾಣಕ್ಕೆ ತಡೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದ್ರ ಅವರಿದ್ದ ನ್ಯಾಯಪೀಠ, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಿ ಆದೇಶಿಸಿದೆ. ವಿಷ್ಣುವರ್ಧನ್ ಸ್ಮಾರಕಕ್ಕೆ ಸಂಬಂಧಪಟ್ಟಂತೆ, ರಾಜ್ಯ ಸರಕಾರ ಸ್ಮಾರಕದ ಕೆಲಸವನ್ನು ನಿಧಾನಗತಿಯಲ್ಲಿ ಮುಂದುವರೆಸಿಕೊಂಡು ಬಂದಿತ್ತು. ಇದೇ ವೇಳೆ ಭಾರತಿ ವಿಷ್ಣುವರ್ಧನ್ ಅವರ ಒತ್ತಾಯಕ್ಕೆ ಮಣಿದು ಸರಕಾರವು, ವಿಷ್ಣು ಸ್ಮಾರಕಕ್ಕೆ ಮೈಸೂರಿನ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಹಾಲಾಳುವಿನ ಉದ್ಬೂರು ಕ್ರಾಸ್ ಬಳಿ ಜಮೀನು ನೀಡಿತ್ತು. ಇದೆ ವೇಳೆ, 2016ರ ಡಿ.6ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷ್ಣುವರ್ಧನ್ ಸ್ಮಾರಕ ಶಂಕುಸ್ಥಾಪನೆ ಮಾಡುವುದಕ್ಕೆ ಮುಂದಾಗಿದ್ದರು. ಬಳಿಕ ವಿಷ್ಣುವರ್ಧನ್ ಕುಟುಂಬಸ್ಥರು ಆ ಜಾಗದಲ್ಲಿ ಭೂಮಿ ಪೂಜೆ ನಡೆಸಿದ್ದರು. ಪೂಜೆ ನಡೆಸಿದ ಬಳಿಕ ಸ್ಥಳಕ್ಕೆ ಸಂಬಂಧಪಟ್ಟಂತೆ ಮಹದೇವಮ್ಮ ಹಾಗೂ ಕೆಲ ಗ್ರಾಮಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ, ವಿಷ್ಣುವರ್ಧನ್ ಸ್ಮಾರಕದ ಕೆಲಸ ಅಲ್ಲಿಗೆ ನಿಂತು ಹೋಗಿತ್ತು. ಇದೀಗ, ಹೈಕೋರ್ಟ್ ಆದೇಶದಂತೆ ವಿಷ್ಣು ಸ್ಮಾರಕಕ್ಕೆ ಗ್ನೀನ್ ಸಿಗ್ನಲ್ ಸಿಕ್ಕಿದೆ. ಆದರೆ, ಅಂತಿಮ ವಿಚಾರಣೆ ಮಾತ್ರ ಬಾಕಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News