ಮಹಿಳಾ ವಿರೋಧಿ ತೇಜಸ್ವಿ ಸೂರ್ಯ ಆಯ್ಕೆಯಾದರೆ ಆಪಾಯ: ರಾಮಲಿಂಗಾರೆಡ್ಡಿ

Update: 2019-04-12 16:38 GMT

ಬೆಂಗಳೂರು, ಎ.12: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮಹಿಳಾ ಹಾಗೂ ಸಂವಿಧಾನ ನಿರ್ಮಾರ್ತೃ ಅಂಬೇಡ್ಕರ್ ವಿರೋಧಿಯಾಗಿದ್ದು, ಇಂತಹವರು ಸಂಸತ್ತಿಗೆ ಆಯ್ಕೆಯಾದರೆ ಭವಿಷ್ಯದಲ್ಲಿ ಭಾರೀ ಅಪಾಯ ಎದುರಾಗಲಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡ್‌ನಲ್ಲಿ ನಡೆದ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಂಡು ಮತಯಾಚಿಸಿ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಮಹಿಳೆಯರ ವಿರುದ್ಧ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಮಾತನಾಡಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಜತೆಗೆ ಈತ ದಲಿತ ಸಮುದಾಯವನ್ನು ತುಳಿಯಲು ಹುನ್ನಾರ ನಡೆಸಿದ್ದು, ಇಂತಹವರನ್ನು ಬೆಂಬಲಿಸಿದರೆ ಅಪಾಯ ಎದುರಾಗಲಿದೆ ಎಂದರು.

ಪ್ರಧಾನಿ ಮೋದಿ ಸರಕಾರ ಜುಮ್ಲಾ ಸರಕಾರವಾಗಿದ್ದು, ಕೇವಲ ವಾಗ್ದಾನಗಳನ್ನು ಮಾತ್ರ ನೀಡುತ್ತದೆ. ಕೊಟ್ಟ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗುತ್ತಿಲ್ಲ. ಈ ಹಿಂದೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ, ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಜನ ಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಿಲ್ಲ. ಇಂತಹ ಸಂದರ್ಭದಲ್ಲಿ ಮೋದಿಗೆ ಮತ ನೀಡಿ ಎನ್ನುತ್ತಾರೆ. ಆದರೆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದು ಮೋದಿಯೋ ಅಥವಾ ಸ್ಥಳೀಯ ಸಂಸದರೋ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಅವರು ಟೀಕಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಜಯನಗರದಲ್ಲಿ ಹತ್ತು ವರ್ಷಗಳ ನಂತರ ಕಾಂಗ್ರೆಸ್ ಗೆದ್ದಿದೆ. ಕಳೆದ ಒಂದು ವರ್ಷದಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅಭಿವೃದ್ಧಿ ಪಥ ತೀವ್ರಗತಿಯಲ್ಲಿ ಸಾಗಿದೆ. ಕ್ಷೇತ್ರದಲ್ಲಿ ಜನಪರ ಕೆಲಸ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಬಿ.ಕೆ.ಹರಿಪ್ರಸಾದ್ ಅತಿ ಹೆಚ್ಚು ಜ್ಞಾನ ಇರುವ ವ್ಯಕ್ತಿಯಾಗಿದ್ದು, ಜನರ ಸಮಸ್ಯೆಗಳನ್ನು ಜಾಣತನದಿಂದ ಬಗೆಹರಿಸುತ್ತಾರೆ. ಕ್ಷೇತ್ರದ ಜನರೊಂದಿಗೆ ನಿರಂತರವಾಗಿ ಒಡನಾಟ ಇಟ್ಟುಕೊಂಡಿರುವ ಹಿರಿಯ ಮುತ್ಸದ್ದಿಯಾಗಿದ್ದಾರೆ. ಇಂತಹ ಹಿರಿಯ ಮುತ್ಸದ್ದಿ ಲೋಕಸಭೆಗೆ ಆಯ್ಕೆಯಾಗಬೇಕು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಬೇಕು ಎಂದು ಅವರು ಹೇಳಿದರು.

ಬೈರಸಂದ್ರ ವಾರ್ಡ್‌ನ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ರೋಡ್ ಶೋ ತಿಲಕನಗರ, ಮಾರೇನಹಳ್ಳಿ ಕೆರೆ, ರಾಗಿಗುಡ್ಡ, ಮಾರೇನಹಳ್ಳೀ, ಸಾರಕ್ಕಿ, ಸಂಗಮ್ ಸರ್ಕಲ್ಗೆ ಬಂದು ಬನಶಂಕರಿವರೆಗೆ ಸಾಗಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News