ನಿಮಗಿದು ತಿಳಿದಿರಲಿ: ನಿಮ್ಮ ಕಿಡ್ನಿಗಳಿಗೆ ಹಾನಿ ಮಾಡುವ 10 ದುರಭ್ಯಾಸಗಳಿವು

Update: 2019-04-12 17:57 GMT

ಮೂತ್ರಪಿಂಡಗಳು ಮಾನವ ಶರೀರದ ಅತ್ಯಂತ ಪ್ರಮುಖ ಅಂಗಗಳಾಗಿವೆ. ಹೆಚ್ಚುವರಿ ನೀರನ್ನು ಶರೀರದಿಂದ ಹೊರಹಾಕುವುದು,ಶರೀರಕ್ಕೆ ಅಗತ್ಯವಿದ್ದಾಗ ನೀರನ್ನು ಉಳಿಸಿಕೊಳ್ಳುವುದು,ಶರೀರದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್‌ಗಳಂತಹ ಖನಿಜಗಳ ಮಟ್ಟಗಳನ್ನು ನಿಯಂತ್ರಿಸುವುದು,ರಕ್ತವನ್ನು ವಿಷವಸ್ತುಗಳಿಂದ ಮುಕ್ತಗೊಳಿಸುವುದು ಮತ್ತು ಮೂತ್ರದ ಮೂಲಕ ತ್ಯಾಜ್ಯಗಳನ್ನು ಹೊರಹಾಕುವುದು ಇತ್ಯಾದಿಗಳು ಇವುಗಳ ಕಾರ್ಯನಿರ್ವಹಣೆಯಲ್ಲಿ ಸೇರಿವೆ.

 ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ(ಸಿಕೆಡಿ)ಯು ಭಾರತದಲ್ಲಿ ಸಾಮಾನ್ಯವಾಗಿದೆ. ಪ್ರತಿ ಹತ್ತು ಜನರಲ್ಲಿ ಓರ್ವ ಸಿಕೆಡಿಯಿಂದ ಬಳಲುತ್ತಿರುತ್ತಾನೆ ಎಂದು ಅಂದಾಜಿಸಲಾಗಿದೆ. ಕಡಿಮೆ ದ್ರವಗಳ ಸೇವನೆ,ಧೂಮ್ರಪಾನ,ಅತಿಯಾದ ಉಪ್ಪಿನ ಸೇವನೆ ಇತ್ಯಾದಿಗಳು ಸಿಕೆಡಿಗೆ ಕಾರಣವಾಗುತ್ತವೆ. ಮೂತ್ರಪಿಂಡಗಳ ಅರೋಗ್ಯವನ್ನು ಕಾಯ್ದುಕೊಳ್ಳಲು ದುರಭ್ಯಾಸಗಳ ವರ್ಜನೆ ಅಗತ್ಯವಾಗಿದೆ. ಇಂತಹ ಹತ್ತು ದುರಭ್ಯಾಸಗಳು ಇಲ್ಲಿವೆ....

►ಸಂಸ್ಕರಿತ ಆಹಾರಗಳ ಅತಿಯಾದ ಸೇವನೆ

ಸಂಸ್ಕರಿತ ಆಹಾರಗಳು ರಂಜಕ ಮತ್ತು ಸೋಡಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತವೆ ಮತ್ತು ಇವು ಮೂತ್ರಪಿಂಡಕ್ಕೆ ಹಾನಿಯನ್ನುಂಟು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಜನರು ತಮಗೆ ಮೂತ್ರಪಿಂಡ ಕಾಯಿಲೆ ಇರಲಿ ಅಥವಾ ಇಲ್ಲದಿರಲಿ,ಸಂಸ್ಕರಿತ ಆಹಾರಗಳ ಸೇವನೆಯನ್ನು ನಿಯಂತ್ರಿಸಬೇಕು.

►ಅತಿಯಾಗಿ ನೋವು ನಿವಾರಕಗಳ ಸೇವನೆ

 ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಇಬುಪ್ರೊಫೆನ್,ಆಸ್ಪಿರಿನ್ ಮತ್ತು ಎಸಿಟಾಮಿನೊಫಿನ್‌ನಂತಹ ನೋವು ನಿವಾರಕ ಮಾತ್ರೆಗಳು ನೋವುಗಳನ್ನು ಕಡಿಮೆ ಮಾಡಬಹುದು,ಆದರೆ ಇದೇ ವೇಳೆ ಅವು ನಿಮ್ಮ ಮೂತ್ರಪಿಂಡಗಳಿಗೆ ಹಾನಿಯನ್ನೂ ಉಂಟು ಮಾಡುತ್ತವೆ. ನೀವು ಈಗಾಗಲೇ ಮೂತ್ರಪಿಂಡ ಸಮಸ್ಯೆಯಿಂದ ನರಳುತ್ತಿದ್ದರೆ ಇಂತಹ ಮಾತ್ರೆಗಳ ಸೇವನೆ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ. ಬ್ಯಾಸಿಟ್ರಾಸಿನ್,ಆ್ಯಂಫೊಟೆರಿಸಿನ್ ಬಿ ಮತ್ತು ಸೆಫಾಲೊಸ್ಪೋರಿನ್‌ನಂತಹ ಕೆಲವು ಪ್ರತಿಜೀವಕ ಔಷಧಿಗಳೂ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತವೆ.

►ಸಾಕಷ್ಟು ನೀರನ್ನು ಸೇವಿಸದಿರುವುದು

 ಶರೀರವು ನಿರ್ಜಲೀಕರಣಗೊಂಡಾಗ ಯಥೇಚ್ಛವಾಗಿ ನೀರು ಸೇವಿಸುವದು ಮೂತ್ರಪಿಂಡಗಳು ವಿಷವಸ್ತುಗಳನ್ನು ಹೊರಗೆ ಹಾಕಲು ನೆರವಾಗುತ್ತದೆ. ಇದೇ ಕಾರಣದಿಂದ ಮೂತ್ರಪಿಂಡ ಕಲ್ಲುಗಳ ಅಪಾಯದಿಂದ ದೂರವಿರಲು ನೀರನ್ನು ಯಥೇಚ್ಛವಾಗಿ ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ನಿರ್ಜಲೀಕರಣವು ಮೂತ್ರಪಿಂಡಗಳ ಹಾನಿಗೆ ಮತ್ತು ಮೂತ್ರಪಿಂಡ ಕಲ್ಲುಗಳಿಗೆ ಮುಖ್ಯ ಕಾರಣಗಳಲ್ಲೊಂದಾಗಿದೆ.

►ಅತಿಯಾಗಿ ಉಪ್ಪಿನ ಸೇವನೆ

ಉಪ್ಪು ಹೆಚ್ಚಾಗಿರುವ ಆಹಾರಗಳಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಅವುಗಳ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅತಿಯಾದ ಉಪ್ಪನ್ನು ಹೊರಹಾಕಲು ಮೂತ್ರಪಿಂಡಗಳು ಹೆಚ್ಚು ಶ್ರಮಿಸಬೇಕಾಗುವುದರಿಂದ ಅವುಗಳಿಗೆ ಹಾನಿಯುಂಟಾಗಬಲ್ಲುದು. ಇದರಿಂದಾಗಿ ಶರೀರದಲ್ಲಿ ಹೆಚ್ಚಿನ ನೀರು ಉಳಿದುಕೊಳ್ಳುತ್ತದೆ ಮತ್ತು ಮೂತ್ರಪಿಂಡ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

►ನಿದ್ರೆಯ ಕೊರತೆ

ನಿದ್ರೆಯು ಮಿದುಳಿನ ಸ್ನಾಯುಗಳಿಗೆ ವಿರಾಮ ನೀಡುತ್ತದೆ ಮತ್ತು ಶರೀರದ ಜೀವಕೋಶಗಳನ್ನು ನವೀಕರಿಸುತ್ತದೆ, ಹೀಗಾಗಿ ನಿದ್ರೆಯು ಅತ್ಯಂತ ಮುಖ್ಯವಾಗಿದೆ. ಮೂತ್ರಪಿಂಡಗಳು ಸೇರಿದಂತೆ ಶರೀರದ ಒಟ್ಟಾರೆ ಆರೋಗ್ಯಕ್ಕೆ ರಾತ್ರಿಯ ಸುಖನಿದ್ರೆ ಅಗತ್ಯವಾಗಿದೆ. ನಿದ್ರೆ-ಜಾಗರ ಚಕ್ರವು ಮೂತ್ರಪಿಂಡಗಳ ಕಾರ್ಯನಿರ್ವಹಣೆಯನ್ನು ವ್ಯವಸ್ಥಿತಗೊಳಿಸುತ್ತದೆ ಮತ್ತು 24 ಗಂಟೆಗಳಿಗೆ ಮೂತ್ರಪಿಂಡಗಳ ಕಾರ್ಯಭಾರವನ್ನು ಸಮನ್ವಯಗೊಳಿಸುತ್ತದೆ.

►ಅತಿಯಾದ ಮಾಂಸ ಸೇವನೆ

ಕೆಂಪು ಮಾಂಸವನ್ನು ಸೇವಿಸಿದ ಬಳಿಕ ಅದು ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ. ಇದು ಮೂತ್ರಪಿಂಡಗಳಿಗೆ ಹಾನಿಕಾರಕವಾಗಬಹುದು ಮತ್ತು ಆಮ್ಲವ್ಯಾಧಿಗೆ ಕಾರಣವಾಗುತ್ತದೆ. ಆಮ್ಲವ್ಯಾಧಿಯುಂಟಾದಾಗ ಸೂಕ್ತ ಪ್ರಮಾಣದಲ್ಲಿ ಆಮ್ಲವನ್ನು ಹೊರಗೆ ಹಾಕಲು ಮೂತ್ರಪಿಂಡಗಳಿಗೆ ಸಾಧ್ಯವಾಗುವುದಿಲ್ಲ. ಪ್ರಾಣಿಜನ್ಯ ಪ್ರೋಟಿನ್ ನಮ್ಮ ಶರೀರಕ್ಕೆ ಅಗತ್ಯವಾಗಿದೆ,ಆದರೆ ಅತಿಯಾದ ಸೇವನೆ ಮೂತ್ರಪಿಂಡಗಳಿಗೆ ಮಾರಣಾಂತಿಕವಾಗಬಲ್ಲುದು.

►ಸೋಂಕುಗಳಿಗೆ ಚಿಕಿತ್ಸೆ ಪಡೆಯದಿರುವುದು

 ನೀವು ಶೀತ,ಫ್ಲೂ,ಟಾನ್ಸಿಲಿಟಿಸ್ ಇತ್ಯಾದಿಗಳಂತಹ ಸಾಮಾನ್ಯ ಸೋಂಕುಗಳಿಂದ ನರಳುತ್ತಿದ್ದರೆ ತಕ್ಷಣ ಪ್ರತಿಜೀವಕಗಳ ಸೇವನೆಯನ್ನು ಆರಂಭಿಸಿ. ಸೋಂಕಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಅಲ್ಲದೆ ವೈರಲ್ ಸೋಂಕು ಕೂಡ ಚಿಕಿತ್ಸೆ ಪಡೆಯದಿದ್ದರೆ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ.

►ಅತಿಯಾದ ಮದ್ಯಪಾನ

ನಿಯಮಿತವಾಗಿ ಅತಿಯಾದ ಮದ್ಯಪಾನ ಸಿಕೆಡಿಯ ಅಪಾಯವನ್ನು ಇಮ್ಮಡಿಗೊಳಿಸುತ್ತದೆ. ಇದೇ ಕಾರಣದಿಂದ ಅತಿಯಾಗಿ ಮದ್ಯ ಸೇವಿಸುವವರು ಮೂತ್ರಪಿಂಡ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಅಲ್ಲದೆ ಮದ್ಯವು ಅತಿಯಾಗಿ ನಿರ್ಜಲೀಕರಣವನ್ನುಂಟು ಮಾಡುವುದರಿಂದ ಇದು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ತೊಡಕನ್ನುಂಟು ಮಾಡುತ್ತದೆ.

►ಮೂತ್ರವಿಸರ್ಜನೆಗೆ ಜಿಪುಣತನ

 ಮೂತ್ರ ವಿಸರ್ಜನೆಯು ವಿಷವಸ್ತುಗಳನ್ನು ನಮ್ಮ ಶರೀರದಿಂದ ಹೊರಹಾಕುವ ಮಾರ್ಗವಾಗಿದೆ. ಆಗಾಗ್ಗೆ ಮೂತ್ರವನ್ನು ವಿಸರ್ಜಿಸದಿದ್ದರೆ ಅದು ಮೂತ್ರಪಿಂಡಗಳಿಗೆ ಹಾನಿಕಾರಕವಾಗುತ್ತದೆ ಮತ್ತು ಕಾಲಕ್ರಮೇಣ ಮೂತ್ರಪಿಂಡ ಕಲ್ಲುಗಳ ಸೃಷ್ಟಿ ಮತ್ತು ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತದೆ.

►ಸಕ್ಕರೆ ಹೆಚ್ಚಿರುವ ಆಹಾರಗಳ ಅತಿಯಾದ ಸೇವನೆ

ಅತಿಯಾದ ಸಕ್ಕರೆಯಿರುವ ಆಹಾರಗಳು ಬೊಜ್ಜಿಗೆ ಕಾರಣವಾಗುತ್ತವೆ ಮತ್ತು ಇದು ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಸಕ್ಕರೆಯ ಅತಿಯಾದ ಸೇವನೆಯು ಮೂತ್ರಪಿಂಡ ರೋಗಕ್ಕೆ ಕಾರಣವಾಗಬಲ್ಲುದು. ಸಕ್ಕರೆ ಬೆರೆತಿರುವ ಪಾನೀಯಗಳು,ಸಿಹಿತಿಂಡಿಗಳು ಮತ್ತು ಸೋಡಾ ಸೇವನೆಯಿಂದ ದೂರವಿರುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News