ಅತಿಯಾದ ಕ್ಯಾಲ್ಸಿಯಂ ಪೂರಕಗಳ ಬಳಕೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು

Update: 2019-04-12 18:01 GMT

 ಕ್ಯಾಲ್ಸಿಯಂ ಕೊರತೆಯು ನಮ್ಮ ಮೂಳೆಗಳು ಮತ್ತು ಹಲ್ಲುಗಳಿಗೆ ಅತ್ಯಂತ ಹಾನಿಕಾರಕವಾಗಿದೆ. ಮೂಳೆಗಳು ಮತ್ತು ಹಲ್ಲುಗಳು ಮಾತ್ರವಲ್ಲ,ಕ್ಯಾಲ್ಸಿಯಂ ಕೊರತೆಯಿಂದ ನಮ್ಮ ಶರೀರವು ವಿವಿಧ ರೀತಿಗಳಲ್ಲಿ ನರಳಬಹುದು. ಶರೀರದ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಲು ಬಹಳಷ್ಟು ಜನರು ಕ್ಯಾಲ್ಸಿಯಂ ಮಾತ್ರೆಗಳು ಅಥವಾ ಸಿರಪ್‌ಗಳನ್ನು ಸೇವಿಸುತ್ತಾರೆ. ಇಂತಹವರ ಪೈಕಿ ನೀವೂ ಒಬ್ಬರಾಗಿದ್ದರೆ ಕ್ಯಾಲ್ಸಿಯಂ ಮಾತ್ರೆಗಳ ಅತಿಯಾದ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲುದು ಎನ್ನುವುದು ನಿಮಗೆ ತಿಳಿದಿರಲಿ. ಇತ್ತೀಚಿನ ಅಧ್ಯಯನವೊಂದು ಈ ವಿಷಯವನ್ನು ಬೆಳಕಿಗೆ ತಂದಿದೆ.

ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಡೆಯಲು ಪೂರಕಗಳ ಸೇವನೆಗಿಂತ ಪೌಷ್ಟಿಕ ಆಹಾರವು ಅತ್ಯುತ್ತಮ ಮೂಲವಾಗಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವ್ಯಕ್ತಿ ಕೆಲವು ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ಆತ/ಆಕೆ ವಿವಿಧ ಕಾರಣಗಳಿಂದ ಸಾವಿನ ಅಪಾಯವನ್ನು ತಗ್ಗಿಸಬಹುದು ಎಂದು ವರದಿಯು ಹೇಳಿದೆ. ಆದರೆ ಪೋಷಕಾಂಶಗಳ ಮೂಲ ಆಹಾರವಾಗಿರಬೇಕೇ ಹೊರತು ಪೂರಕಗಳಲ್ಲ ಎನ್ನುವುದನ್ನು ಅದು ಸ್ಪಷ್ಟಪಡಿಸಿದೆ.

ದಿನವೊಂದಕ್ಕೆ 1,000 ಮಿಲಿಗ್ರಾಮ್‌ಗಿಂತ ಹೆಚ್ಚಿನ ಕ್ಯಾಲ್ಸಿಯಂ ಪೂರಕಗಳ ಸೇವನೆಯು ಕ್ಯಾನ್ಸರ್ ಸಾವುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯು ವಿವರಿಸಿದೆ.

ಅಮೆರಿಕದ ಟಫ್ಸ್ ವಿವಿಯ ಸಹಾಯಕ ಪ್ರೊಫೆಸರ್ ಫಾಂಗ್ ಫಾಂಗ್ ಝಾಂಗ್ ಅವರ ನೇತೃತ್ವದಲ್ಲಿ ನಡೆಸಲಾದ ಅಧ್ಯಯನದಲ್ಲಿ 27,000ಕ್ಕೂ ಅಧಿಕ ವಯಸ್ಕರನ್ನು ಭಾಗಿಯಾಗಿಸಲಾಗಿತ್ತು ಮತ್ತು ಪೋಷಕಾಂಶ ಪೂರಕಗಳ ಅತಿಯಾದ ಸೇವನೆಯ ಪರಿಣಾಮದ ಮೇಲೆ ಕಣ್ಣಿಡಲಾಗಿತ್ತು.

 ಪೂರಕಗಳ ಬಳಕೆಯ ಸಂಭಾವ್ಯ ಲಾಭಗಳು ಮತ್ತು ಹಾನಿಗಳ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದ್ದರೂ,ಅತಿಯಾದ ಪೋಷಕಾಂಶ ಪೂರಕಗಳ ಸೇವನೆಯು ಕೆಲವು ವಿಧಗಳ ಕ್ಯಾನ್ಸರ್‌ನ ಹೆಚ್ಚಿನ ಅಪಾಯ ಸೇರಿದಂತೆ ಪ್ರತಿಕೂಲ ಪರಿಣಾಮಗಳೊಂದಿಗೆ ಗುರುತಿಸಿಕೊಂಡಿರುವುದನ್ನು ಕೆಲವು ಅಧ್ಯಯನಗಳು ಪತ್ತೆ ಹಚ್ಚಿವೆ ಎಂದು ಝಾಂಗ್ ತಿಳಿಸಿದ್ದಾರೆ.

ಸಾಕಷ್ಟು ವಿಟಾಮಿನ್ ಕೆ ಮತ್ತು ಮ್ಯಾಗ್ನೀಷಿಯಂ ಸೇವನೆಯು ಸಾವಿನ ಅಪಾಯವನ್ನು ತಗ್ಗಿಸುತ್ತದೆ ಎಂದಿರುವ ವರದಿಯು,ವಿಟಾಮಿನ್ ಎ,ವಿಟಾಮಿನ್ ಕೆ ಮತ್ತು ಸತುವು ಇವುಗಳ ಸೂಕ್ತ ಸೇವನೆಯು ಹೃದಯನಾಳೀಯ ರೋಗಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದೂ ಉಲ್ಲೇಖಿಸಿದೆ.

ಜನರು ಆಹಾರಗಳ ಮೂಲಕ ಪೋಷಕಾಂಶಗಳನ್ನು ಸೇವಿಸಬೇಕು ಮತ್ತು ಮಾತ್ರೆಗಳನ್ನು ಸೇವಿಸುವುದನ್ನು ನಿವಾರಿಸಬೇಕು ಎಂದು ವರದಿಯು ಕಟ್ಟುನಿಟ್ಟಾಗಿ ಸೂಚಿಸಿದೆ. ಅಲ್ಲದೆ ಆಹಾರ ಪೂರಕಗಳು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ ಎಂದೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News