ಚುನಾವಣೆಯ ನಂತರ ಯಡಿಯೂರಪ್ಪ ಮೂಲೆಗುಂಪು ಖಚಿತ: ಸಚಿವ ವೆಂಕಟರಾವ್ ನಾಡಗೌಡ
ವಿಜಾಪುರ, ಎ.12: ಲೋಕಸಭಾ ಚುನಾವಣೆಯ ನಂತರ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿಯಂತೆ ಯಡಿಯೂರಪ್ಪ ಸಹ ಬಿಜೆಪಿಯಲ್ಲಿ ಮೂಲೆ ಗುಂಪಾಗಲಿದ್ದಾರೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಭವಿಷ್ಯ ನುಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ. ಯಡಿಯೂರಪ್ಪ, ಸಿ.ಎಂ. ಉದಾಸಿ ಸೇರಿದಂತೆ ಅನೇಕ ನಾಯಕರು ಮಕ್ಕಳು ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ. ನಾಳೆ ಇವರ ಮೊಮ್ಮಕ್ಕಳು ರಾಜಕೀಯಕ್ಕೆ ಬರುತ್ತಾರೆ. ಹೀಗಿದ್ದ ಮೇಲೆ ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ದೇವೇಗೌಡರು ಹಿಂಬಾಗಿಲಿನಿಂದ ರಾಜಕೀಯಕ್ಕೆ ಬಂದಿಲ್ಲ. ಜನರೇ ಅವರಿಗೆ ಆಶೀರ್ವದಿಸಿ ಕಳಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿಯಂತೆ ಯಡಿಯೂರಪ್ಪನವರು ಪಕ್ಷದಲ್ಲಿ ಮೂಲೆಗುಂಪಾಗಲಿರುವುದು ಖಚಿತ. ಆ ಆತಂಕದಲ್ಲೆ ಅವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.