ನೂರು ವರ್ಷಗಳ ಹಿಂದೆ - ಶತಮಾನದ ನಂತರ

Update: 2019-04-12 18:31 GMT

ಕೊಲೆ, ಸುಲಿಗೆ, ಹತ್ಯೆ, ಹಿಂಸಾಚಾರ, ಬಾಂಬ್ ದಾಳಿ, ಗುಂಡಿನ ದಾಳಿ, ಸೇನಾ ಕಾರ್ಯಾಚರಣೆ, ಲಾಂಗು ಮಚ್ಚುಗಳ ರೌದ್ರ ನೃತ್ಯ ಇವೆಲ್ಲವನ್ನೂ ನಿತ್ಯ ಜೀವನದ ಒಂದು ಭಾಗವಾಗಿ ಸ್ವೀಕರಿಸಿಯೇ ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿಹಿಡಿಯುವ ಆಶಯದೊಂದಿಗೆ ಭಾರತ ದಿಟ್ಟ ಹೆಜ್ಜೆ ಹಾಕುತ್ತಿದೆ. ಈ ಹಿಂಸಾತ್ಮಕ ಪರಿಕರಗಳನ್ನು ಕುರಿತ ಪರಿಕಲ್ಪನೆ ಬದಲಾಗಿದೆ, ಬಳಕೆಯ ಮಾರ್ಗಗಳು ಬದಲಾಗಿವೆ. ಆದರೆ ಸಾವು ಬದುಕಿನ ಹೋರಾಟದಲ್ಲಿ ಸೃಷ್ಟಿಯಾಗಿರುವ ಭೀತಿಯ ವಾತಾವರಣ ಬದಲಾಗಿಲ್ಲ. ಸಾವು ಬೆನ್ನ ಹಿಂದೆಯೇ ಇದೆ ಎನ್ನುವ ಎಚ್ಚರಿಕೆಯೊಂದಿಗೇ ರಾಜಕೀಯ ವಿರೋಧವನ್ನೂ ವ್ಯಕ್ತಪಡಿಸುವ ಸ್ಥಿತಿಯನ್ನು ತಲುಪಿದ್ದೇವೆ. ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಸ್ವಕೀಯ-ಪರಕೀಯತೆಯ ಭಾವನೆಯೇ ಸಾವು ಬದುಕಿನ ಪ್ರಶ್ನೆಯನ್ನು ನಿರ್ಣಾಯಕವಾಗಿಸುತ್ತಿದೆ. ಒಂದು ಮಾಂಸದ ತುಂಡು, ಒಂದು ಅಮಾಯಕ ಪ್ರಾಣಿ ಅಥವಾ ಒಂದು ಮುಂದಣ ಹೆಜ್ಜೆ ಜೀವ ಭಾವಗಳ ನಡುವಿನ ಬಾಂಧವ್ಯವನ್ನು ಕೊನೆಗೊಳಿಸಲು ಸಾಕಾಗಿದೆ. ಸಾವು ನಮ್ಮನ್ನು ಬಾಧಿಸುತ್ತಿದೆ. ಆದರೆ ಎಲ್ಲರ ಸಾವು ಬಾಧಿಸುತ್ತಿಲ್ಲ. ಸಾವು ಸಾಪೇಕ್ಷ ವಾಗಿದೆ. ಸಾವಿನ ಸುತ್ತಲಿನ ಭಾವನೆಗಳೂ ಸಾಪೇಕ್ಷವಾಗಿವೆ. ಈ ವಿಕೃತಿಯ ನಡುವೆಯೇ ಒಬ್ಬರ ಸಾವು ಮತ್ತೊಬ್ಬರ ಸಾಧನೆಯ ಮೆಟ್ಟಿಲೂ ಆಗುತ್ತಿದೆ.

 ಇಷ್ಟರ ನಡುವೆ ಸ್ವತಂತ್ರ ಭಾರತ ನೂರು ವರ್ಷಗಳ ಹಿಂದಿನ ಒಂದು ಹತ್ಯಾಕಾಂಡವನ್ನು ನೆನೆಯುತ್ತಿದೆ. ಸ್ವತಂತ್ರ ಭಾರತದ ಹತ್ಯಾಕಾಂಡಗಳು ಮೇಲೆ ಹೇಳಿದಂತೆ ಸಾಪೇಕ್ಷತೆಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆ ಸಂಭವಿಸಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಮ್ಮ ಸುಪ್ತ ಭಾವನೆಗಳನ್ನು ಬಡಿದೆಬ್ಬಿಸುತ್ತಿವೆ. 1919ರ ಎಪ್ರಿಲ್ 13, ಬೈಸಾಕಿ ಉತ್ಸವದ ದಿನ. ಬ್ರಿಟಿಷರು ಜಾರಿಗೆ ತಂದಿದ್ದ ರೌಲಟ್ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರವಾಗುತ್ತಿದ್ದ ಸಂದರ್ಭ. ಪಂಜಾಬ್ ಪ್ರಾಂತದ ಅಮೃತಸರದಲ್ಲಿ ಪ್ರಕ್ಷುಬ್ಧ ವಾತಾವರಣ. ಈ ಹಿನ್ನೆಲೆಯಲ್ಲೇ ಅಮೃತಸರದಲ್ಲಿನ ಜಲಿಯನ್ ವಾಲಾಬಾಗ್ ಎಂಬ ನಾಲ್ಕು ಗೋಡೆಗಳ ನಡುವಿನ ಒಂದು ಪ್ರದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನಾ ಸಮಾವೇಶವನ್ನು ಆಯೋಜಿಸುತ್ತಾರೆ. ಇದೊಂದು ಶಾಂತಿಯುತ ಪ್ರತಿಭಟನೆಯಾಗಿತ್ತು. ಯಾರ ಬಳಿಯೂ ಶಸ್ತ್ರಾಸ್ತ್ರಗಳಿರಲಿಲ್ಲ. ಕ್ರಾಂತಿಕಾರಿ ಚಟುವಟಿಕೆಗಳ ಸುಳಿವೂ ಇರಲಿಲ್ಲ. ಆದರೂ ಬ್ರಿಟಿಷ್ ಪ್ರಭುತ್ವಕ್ಕೆ ಇದರಲ್ಲಿ ಅಪಾಯ ಕಂಡುಬಂದಿತ್ತು. ಪ್ರಭುತ್ವ ಸದಾ ಹಾಗೆಯೇ. ತನ್ನ ಅಸ್ತಿತ್ವಕ್ಕೆ ಸವಾಲೆಸೆಯುವ ಜನರ ಶಾಂತಿಯುತ ಪ್ರತಿಭಟನೆಗಳೂ ಪ್ರಭುತ್ವಕ್ಕೆ ವಿಧ್ವಂಸಕವಾಗಿಯೇ ಕಾಣುತ್ತದೆ ಅಥವಾ ತನ್ನನ್ನು ಪ್ರಶ್ನಿಸುವ ಯಾವುದೇ ಅಭಿವ್ಯಕ್ತಿ ದಮನ ಮಾಡಬಹುದಾದ ಕ್ರಿಯೆಯಾಗಿ ಬಿಡುತ್ತದೆ. ಸ್ವತಂತ್ರ ಭಾರತದಲ್ಲೂ ಇಂತಹ ಪ್ರಸಂಗಗಳು ಹೇರಳವಾಗಿವೆ.

ಜಲಿಯನ್ ವಾಲಾಬಾಗ್‌ನಲ್ಲಿ ನೆರೆದಿದ್ದ ಸಾವಿರಾರು ಜನರು ಬ್ರಿಟಿಷ್ ಪ್ರಭುತ್ವಕ್ಕೆ ಹೀಗೆಯೇ ಕಂಡಿರಬೇಕು. ಈ ಪ್ರಾಂತದಲ್ಲಿ ಬ್ರಿಗೇಡಿಯರ್ ಜನರಲ್ (ತಾತ್ಕಾಲಿಕ ಹುದ್ದೆ) ಆಗಿದ್ದ ರೆಗಿನಾಲ್ಡ್ ಡಯರ್ ಅವರ ಸ್ವಾಮಿನಿಷ್ಠೆ ಕೆರಳಿತ್ತು. 50 ರೈಫಲ್‌ಗಳನ್ನು ಹೊತ್ತ ಹಾಗೂ 40 ಖುಕ್ರಿ (ಉದ್ದವಾಗಿರುವ, ಅಂಚಿನಲ್ಲಿ ಬಾಗಿದಂತಿರುವ ಕತ್ತಿಗಳು) ಹೊತ್ತ ಗೂರ್ಖಾ ಪಡೆಯನ್ನು ಒಳಗೆ ಕರೆದೊಯ್ದ ಡಯರ್ ಯಾವುದೇ ಎಚ್ಚರಿಕೆಯನ್ನೂ ನೀಡದೆ, ಏಕಾಏಕಿ 1,650 ಸುತ್ತು ಗುಂಡಿನ ಸುರಿಮಳೆಯನ್ನು ಸುರಿಸಲು ಪ್ರೇರಣೆಯಾಗಿದ್ದರು. ನಿಶ್ಶಸ್ತ್ರರಾಗಿದ್ದ ಜನರು ಈ ಗುಂಡಿನ ದಾಳಿಯನ್ನು ಹಿಮ್ಮೆಟ್ಟಿಸಲು ಸಾಧ್ಯವೇ ಇರಲಿಲ್ಲ. ಅಧಿಕೃತ ಮೂಲಗಳ ಪ್ರಕಾರ 379 ಜನರ ಹತ್ಯೆಯಾಗಿತ್ತು ಎಂದು ಹೇಳಲಾಗಿತ್ತು. ಆದರೆ ಹಲವು ಚರಿತ್ರಕಾರರು ಈ ಘಟನೆಯಲ್ಲಿ 500ರಿಂದ 600 ಜನರು ಹತ್ಯೆಗೊಳಗಾಗಿರುವುದನ್ನು ದಾಖಲಿಸುತ್ತಾರೆ. ಈ ಘಟನೆಯ ನಂತರ ಪ್ರತಿಕ್ರಿಯಿಸಿದ ಡಯರ್ ಪಂಜಾಬ್‌ನಲ್ಲಿ ಮಾತ್ರವೇ ಅಲ್ಲದೆ ಇಡೀ ದೇಶದಲ್ಲಿ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿತ್ತು ಎಂದು ಒಪ್ಪಿಕೊಳ್ಳುತ್ತಾರೆ. 1920ರಲ್ಲಿ ಬ್ರಿಟನ್ ಸಂಸತ್ತಿನಲ್ಲಿ ಈ ಘಟನೆ ಕುರಿತು ಹೇಳಿಕೆ ನೀಡಿದ ವಿನ್‌ಸ್ಟನ್ ಚರ್ಚಿಲ್ ಜನರಲ್ ಡಯರ್ ಅವರ ಕೃತ್ಯವನ್ನು ರಾಕ್ಷಸೀ ಪ್ರವೃತ್ತಿ ಎಂದು ಖಂಡಿಸುತ್ತಾರೆ. ಇದು ಬ್ರಿಟಿಷ್ ಸರಕಾರದ ನೀತಿಯಲ್ಲ ಎಂದೂ ಒಂದೆಡೆ ಹೇಳುತ್ತಾರೆ. ಪ್ರಭುತ್ವ ಹೇಗೆ ತನ್ನ ಹೊಣೆಯನ್ನು ಸ್ವಾಮಿನಿಷ್ಠೆಗೆ ಬದ್ಧವಾಗಿರುವ ಸೇನೆಯ ಮೇಲೆ ಹೊರಿಸುತ್ತದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಇಲ್ಲಿ ಗುಂಡಿನ ದಾಳಿ ನಡೆಸಲು ಆದೇಶ ನೀಡಿದ್ದು ಬ್ರಿಟಿಷ್ ಸರಕಾರವನ್ನು ಪ್ರತಿನಿಧಿಸಿದ ಒಬ್ಬ ಸೇನಾಧಿಕಾರಿ. ಬ್ರಿಟಿಷ್ ಸರಕಾರ ತನ್ನ ಪಶ್ಚಾತ್ತಾಪ ವ್ಯಕ್ತಪಡಿಸುತ್ತದೆ. ಜನರಲ್ ಡಯರ್‌ನನ್ನು ಹುದ್ದೆಯಿಂದ ಪದಚ್ಯುತಗೊಳಿಸುತ್ತದೆ. ಇಂದು ನಾವು ಈ ಹತ್ಯಾಕಾಂಡದ ಶತಮಾನದ ಸಂದರ್ಭದಲ್ಲಿದ್ದೇವೆ. ನೂರು ವರ್ಷಗಳ ನಂತರ ಬ್ರಿಟನ್ ಸರಕಾರ ಈ ಘಟನೆಗೆ ಕ್ಷಮೆಯಾಚಿಸಲು ಅಪೇಕ್ಷಿಸುತ್ತಿದ್ದೇವೆ. ಬ್ರಿಟನ್ ಪ್ರಧಾನಿ ತೆೆರೇಸಾ ಮೇ ಮತ್ತೊಮ್ಮೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆಯೇ ಹೊರತು ಕ್ಷಮೆ ಯಾಚಿಸಿಲ್ಲ. ಇಲ್ಲಿಯೂ ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಗಮನಿಸಬೇಕು. ಬ್ರಿಟನ್ನಿನ ಪ್ರಭುತ್ವ ತನ್ನ ವಸಾಹತು ಧೋರಣೆಯಿಂದ ಹೊರಬಂದಿಲ್ಲ. ಆದರೆ ಅಲ್ಲಿನ ಆಳುವ ಪ್ರತಿನಿಧಿಗಳು ತಮ್ಮ ಚಾರಿತ್ರಿಕ ಪ್ರಮಾದಗಳಿಗೆ ವಿಷಾದಿಸುತ್ತಾರೆ. ಈ ವಿಷಾದ, ಪಶ್ಚಾತ್ತಾಪ ಮತ್ತು ಪರಿತಾಪದ ನುಡಿಗಳು ಮೃತ ಜೀವಗಳಿಗೆ ಅಪ್ರಸ್ತುತ, ನೊಂದ ಜೀವಗಳಿಗೆ?

ಇಲ್ಲಿ ನೊಂದವರಾರು? ಭಾರತದ ಜನಸಾಮಾನ್ಯರು. ಜಲಿಯನ್ ವಾಲಾಬಾಗ್‌ನಲ್ಲಿ ನೆರೆದಿದ್ದವರು ಸಾಮಾನ್ಯ ಜನತೆ. ಬ್ರಿಟಿಷ್ ವಸಾಹತು ಆಳ್ವಿಕೆಯ ಫಲಾನುಭವಿಗಳಲ್ಲ. ಹತ್ಯೆಗೊಳಗಾದ 500ಕ್ಕೂ ಹೆಚ್ಚು ಜನರ ಕುಟುಂಬಸ್ಥರ ಮೂರು ನಾಲ್ಕು ಪೀಳಿಗೆಗಳು ಸ್ವತಂತ್ರ ಭಾರತದಲ್ಲಿ ಬಾಳಿವೆ. ಇವರಿಗೆ ಯಾವ ಸರಕಾರ ತಾನೇ ಯಾವ ರೀತಿಯ ಸಾಂತ್ವನ ಹೇಳಲು ಸಾಧ್ಯ.? ಇಲ್ಲಿ ಕೊಂದವರಾರು ? ನೇರವಾಗಿ ಗುಂಡಿಟ್ಟು ಕೊಂದ ಸೈನಿಕರು, ಗೂರ್ಖಾ ಪಡೆಗಳು ಬ್ರಿಟಿಷ್ ಪ್ರಜೆಗಳಾಗಿರಲಿಲ್ಲ. ಭಾರತೀಯರೇ ಆಗಿದ್ದರೂ, ತಮ್ಮ ಸೋದರ ಸೋದರಿಯರು ಹತರಾಗುತ್ತಿದ್ದಾರೆ ಎಂದೂ ಲೆಕ್ಕಿಸದೆ ಮಾರಣ ಹೋಮ ನಡೆಸಿದ್ದರು. ಕುರುಕ್ಷೇತ್ರದ ಅರ್ಜುನ ನೆನಪಾಗುವುದಿಲ್ಲವೇ? ಡಯರ್ ಹೇಳಿದ್ದಂತೆ ಪ್ರಭುತ್ವಕ್ಕೆ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಲು ಇರುವ ಏಕೈಕ ಮಾರ್ಗ ಹಿಂಸೆ ಮತ್ತು ಈ ಮಾರ್ಗದಲ್ಲಿ ಬಳಸಬಹುದಾದ ಏಕೈಕ ಅಸ್ತ್ರ ಸೇನೆ. ಬ್ರಿಟಿಷ್ ದೊರೆಗಳಿಗೆ ಪರಿತಾಪ ಇರಲಿಲ್ಲ, ಆತ್ಮಸಾಕ್ಷಿಯೂ ಇರಲಿಲ್ಲ. ಆದರೆ ಗುಂಡಿನ ದಾಳಿ ನಡೆಸಿದ ಗೂರ್ಖಾ ರೆಜಿಮೆಂಟ್‌ನ ಸೈನಿಕರ ಆತ್ಮಸಾಕ್ಷಿಯನ್ನು ಕೇಳಿದವರಾರು? ಇತಿಹಾಸದಲ್ಲಿ ಇವರ ಸುಪ್ತ ಪ್ರಜ್ಞೆ ದಾಖಲಾಗಿದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಸ್ವಾಮಿನಿಷ್ಠೆಗೆ ಬಲಿಯಾಗಿ ತಮ್ಮವರನ್ನೇ ಕೊಂದ ಸೈನಿಕರ ಮನದಾಳದ ವೇದನೆಯನ್ನು ಊಹಿಸಿದರೂ ಸಾಕು. ಸಂವೇದನೆ ಇರಬೇಕು.

 ಇರಲಿ, ಜಲಿಯನ್‌ವಾಲಾಬಾಗ್ ಘಟನೆ ಸಂಭವಿಸಿದ ಶತಮಾನದ ನಂತರ, ಕಳೆದ ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತದ ಹೆಜ್ಜೆ ಗುರುತುಗಳನ್ನು ಗಮನಿಸಿದಾಗ ನಮಗೆ ಹಲವಾರು ರೀತಿಯ ಡಯರ್‌ಗಳು ಕಾಣುತ್ತಾರೆ, ವಿಭಿನ್ನ ರೀತಿಯ ಗೂರ್ಖಾ ರೆಜಿಮೆಂಟ್‌ಗಳು ಕಾಣುತ್ತವೆ. 1984ರ ಸಿಖ್ ವಿರೋಧಿ ದಂಗೆಗಳಲ್ಲಿ ಮಡಿದ ಸಾವಿರಾರು ಅಮಾಯಕರು, 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮಡಿದ ಸಾವಿರಾರು ಬಡಪಾಯಿಗಳು, ಭೋಪಾಲ್ ಅನಿಲ ದುರಂತದಲ್ಲಿ ಮಡಿದ ಶ್ರಮಜೀವಿಗಳು, ಕಾಶ್ಮೀರದಲ್ಲಿ ಸಾಯುತ್ತಲೇ ಇರುವ ಜನಸಾಮಾನ್ಯರು, ಮತಾಂಧತೆ ಅಗ್ನಿಜ್ವಾಲೆಯಲ್ಲಿ ಬೆಂದ ಸಾವಿರಾರು ಜೀವಗಳು ಈ ರೆಜಿಮೆಂಟ್‌ಗಳನ್ನು, ಡಯರ್‌ಗಳನ್ನು ನೆನಪಿಸುತ್ತವೆ. ಸ್ವತಂತ್ರ ಭಾರತದಲ್ಲಿ ನಡೆದ ಈ ದುರ್ಘಟನೆಗಳಿಗೂ ಯಾರೂ ಯಾರ ಬಳಿಯೂ ಕ್ಷಮೆ ಯಾಚಿಸಿಲ್ಲ. ‘‘ಛೆ ಹೀಗಾಗಬಾರದಿತ್ತು’’ ಎನ್ನುವ ಪರಿತಾಪದ ಮಾತುಗಳು ಹರಿದ ಗಾಳಿಪಟಕ್ಕೆ ತೇಪೆ ಹಾಕಿದಂತೆ ಅಲ್ಲವೇ? ಏಕೆ ಕ್ಷಮೆ ಯಾಚಿಸುವುದಿಲ್ಲ ಎಂದರೆ ಈ ಸಾವುಗಳು ಸಾಪೇಕ್ಷತೆ ಪಡೆದಿವೆ. ಸತ್ತವರು ಸಾವಿಗೆ ಅರ್ಹತೆಯನ್ನು ಪಡೆದಿದ್ದವರು. ಅವರು ಸಾಯಬೇಕಿತ್ತು ಸಾಯುತ್ತಿದ್ದಾರೆ ಕ್ಷಮೆ ಏಕೆ? ಈ ಭಾವನೆ ನಮ್ಮ ನಡುವೆಯೇ ವ್ಯವಸ್ಥಿತವಾಗಿ ಬೇರೂರುತ್ತಿರುವ ಸಂದರ್ಭದಲ್ಲೇ ನಾವು ಜಲಿಯನ್ ವಾಲಾಬಾಗ್ ನೆನೆಯುತ್ತಿದ್ದೇವೆ. ಜನರಲ್ ಡಯರ್‌ನನ್ನು ಬ್ರಿಟಿಷ್ ಸರಕಾರ ಶಿಕ್ಷಿಸಿತ್ತು. ಆದರೆ ಬ್ರಿಟನ್ನಿನ ಸಂಪ್ರದಾಯವಾದಿ ಜನತೆ ಅವನನ್ನು ಶ್ಲಾಘಿಸಿದ್ದರು.

ಅವನೊಡನೆ ಐಕ್ಯಮತ ಪ್ರದರ್ಶಿಸಿದ್ದರು. ಬಲಪಂಥೀಯ ಪತ್ರಿಕೆ ‘ಮಾರ್ನಿಂಗ್ ಪೋಸ್ಟ್’ ಡಯರ್‌ನ ನೆರವಿಗಾಗಿ ಸಾರ್ವಜನಿಕರಿಂದ ನಿಧಿಯನ್ನೂ ಸಂಗ್ರಹಿಸಿ 26,000 ಪೌಂಡ್ ಒಟ್ಟುಮಾಡಿತ್ತು. ಖ್ಯಾತ ಚಿಂತಕ ರುಡ್ಯಾರ್ಡ್ ಕಿಪ್ಲಿಂಗ್ ಈ ನಿಧಿಗೆ ಹತ್ತು ಪೌಂಡ್ ಸಲ್ಲಿಸಿದ್ದರು. ಡಯರ್ 1927ರಲ್ಲಿ ಮೃತಪಟ್ಟ ನಂತರ ಅಂತ್ಯಸಂಸ್ಕಾರಕ್ಕೆ ತಮ್ಮ ಸಂದೇಶ ಕಳುಹಿಸಿದ್ದ ಕಿಪ್ಲಿಂಗ್ ‘‘ಆತ ತನ್ನ ಕರ್ತವ್ಯವನ್ನು ತನಗನಿಸಿದಂತೆ ನಿರ್ವಹಿಸಿದ್ದಾನೆ’’ ಎಂದು ಮಾರ್ಮಿಕವಾಗಿ ಹೇಳಿದ್ದರು. ಭಾರತದ ಸಂದರ್ಭ ದಲ್ಲಿ ಅಲುಗಾಡಿದ ಆಲದ ಮರ, ರಾಜಧರ್ಮ ಮುಂತಾದ ಪದಗಳು ನೆನಪಾಗುವುದಿಲ್ಲವೇ? ಇರಲಿ. ಸಾವು ಮನುಜ ಪ್ರಜ್ಞೆಯನ್ನು ವಿಚಲಿತಗೊಳಿಸದೆ ಹೋದಾಗ ಇಂತಹ ಪ್ರತಿಕ್ರಿಯೆಗಳು ಸಹಜ. ಸಾವು ಸಾಪೇಕ್ಷವಾದಾಗಲೂ ಹೌದು.

ಕೊನೆಯದಾಗಿ, ಜಲಿಯನ್‌ವಾಲಾಬಾಗ್ ಘಟನೆಯ ನಂತರ ತಮಗೆ ಬ್ರಿಟನ್ ಸರಕಾರ ನೀಡಿದ್ದ ನೈಟ್‌ಹುಡ್ ತಿರಸ್ಕರಿಸಿ ಪ್ರತಿಭಟಿಸಿದ್ದ ರವೀಂದ್ರನಾಥ್ ಟಾಗೋರ್ ತಮ್ಮ ವಿರೋಧವನ್ನು ಹೀಗೆ ದಾಖಲಿಸುತ್ತಾರೆ. ‘‘ಪಂಜಾಬ್‌ನಲ್ಲಿ ನಮ್ಮ ಸೋದರರು ಅನುಭವಿಸಿರುವ ಅಪಮಾನ, ಹಿಂಸೆ ಮತ್ತು ಸಂಕಷ್ಟಗಳು ಅದುಮಿಟ್ಟ ಮೌನವನ್ನು ಭೇದಿಸಿ ದೇಶದ ಮೂಲೆ ಮೂಲೆಯನ್ನು ತಲುಪುತ್ತಿದೆ. ಈ ಘಟನೆ ದೇಶದ ಜನತೆಯ ಹೃದಯಗಳಲ್ಲಿ ಉಂಟುಮಾಡಿರುವ ರೋಷಾಗ್ನಿಯನ್ನು ಬ್ರಿಟಿಷ್ ಸರಕಾರ ನಿರ್ಲಕ್ಷಿಸಿದೆ. ಬಹುಶಃ ಬ್ರಿಟನ್ನಿನ ಪ್ರಭುತ್ವ ತಾವು ಮಹತ್ಕಾರ್ಯ ಸಾಧಿಸಿದ್ದೇವೆ ಎಂಬ ಆತ್ಮರತಿಯಿಂದ ಸ್ವಪ್ರಶಂಸೆಯಲ್ಲಿ ತೊಡಗಿರಬೇಕು.’’ ಟಾಗೋರರ ಈ ಅದ್ಭುತ ಸಾಲುಗಳು ಶತಮಾನದ ನಂತರವೂ ಪ್ರಸ್ತುತ ಎನಿಸಿದರೆ ಅಚ್ಚರಿಯೇನಿಲ್ಲ. ನಾಗರಿಕ ಪ್ರಜ್ಞೆ ಎಚ್ಚೆತ್ತಿದ್ದರೆ ಈಗಲೂ ನಮಗೆ ಡಯರ್‌ಗಳು ಸುತ್ತಲೂ ಕಾಣುತ್ತಾರೆ. ಟಾಗೋರರೂ ಕಾಣಿಸಿಕೊಳ್ಳುತ್ತಾರೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News