ಇಂಝಮಾಮ್, ಬೌಚರ್‌ಗೆ ಎಂಸಿಸಿ ಗೌರವ ಆಜೀವ ಸದಸ್ಯತ್ವ

Update: 2019-04-12 18:42 GMT

ಲಂಡನ್, ಎ.12: ಕ್ರಿಕೆಟ್‌ಗೆ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಪಾಕಿಸ್ತಾನದ ಇಂಝಮಾಮ್-ಉಲ್-ಹಕ್ ಹಾಗೂ ದ.ಆಫ್ರಿಕದ ಮಾರ್ಕ್ ಬೌಚರ್‌ರಿಗೆ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ (ಎಮ್‌ಸಿಸಿ) ಗೌರವ ಆಜೀವ ಸದಸ್ಯತ್ವವನ್ನು ನೀಡಲಾಗಿದೆ. ಶುಕ್ರವಾರ ಈ ಘೋಷಣೆಯನ್ನು ಹೊರಡಿಸಲಾಗಿದೆ.

ಪಾಕ್‌ನ ಮಾಜಿ ಆಟಗಾರನಾಗಿರುವ ಇಂಝಮಾಮ್ 119 ಟೆಸ್ಟ್ ಪಂದ್ಯಗಳಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ್ದಾರೆ. 2001-07ರ ಅವಧಿಯಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದ ಅವರು, ಟೆಸ್ಟ್‌ನಲ್ಲಿ 50.16ರ ಸರಾಸರಿಯಲ್ಲಿ 25 ಶತಕಗಳೊಂದಿಗೆ 8,829 ರನ್ ಕಲೆ ಹಾಕಿದ್ದಾರೆ. 378 ಏಕದಿನ ಪಂದ್ಯಗಳಿಂದ 11, 739 ರನ್ ಗಳಿಸಿದ್ದಾರೆ.

2007ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ 49 ವರ್ಷದ ಇಂಝಮಾಮ್, ಅಫ್ಘಾನಿಸ್ತಾನ ತಂಡದ ಮುಖ್ಯ ಕೋಚ್ ಹಾಗೂ 2016ರಲ್ಲಿ ಪಾಕಿಸ್ತಾನ ತಂಡದ ಮುಖ್ಯ ಆಯ್ಕೆಗಾರರಾಗಿದ್ದಾರೆ.

ಮತ್ತೊಂದೆಡೆ ದ.ಆಫ್ರಿಕದ ಮಾಜಿ ಆಟಗಾರ ಬೌಚರ್ 146 ಟೆಸ್ಟ್ ಪಂದ್ಯಗಳಿಂದ 5,498 ರನ್, 530 ಕ್ಯಾಚ್ ಹಾಗೂ 23 ಸ್ಟಂಪಿಂಗ್ ಮಾಡಿದ್ದಾರೆ. 42 ವರ್ಷದ ಆಟಗಾರ 290 ಏಕದಿನ ಪಂದ್ಯಗಳನ್ನು ಆಡಿದ್ದು, 4,523 ರನ್, 395 ಕ್ಯಾಚ್ ಹಾಗೂ 21 ಸ್ಟಂಪಿಂಗ್ಸ್ ಮಾಡಿದ್ದಾರೆ. ಒಟ್ಟಾರೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 998 ಕ್ಯಾಚ್‌ಗಳನ್ನು ಪಡೆದ ಸಾಧನೆ ಅವರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News