ಎಐಎಫ್‌ಎಫ್‌ನಿಂದ ಆಂತರಿಕ ಗಡುವು ನಿಗದಿ

Update: 2019-04-12 18:52 GMT

ಹೊಸದಿಲ್ಲಿ, ಎ.12: ಭಾರತ ಪುರುಷರ ಫುಟ್ಬಾಲ್ ತಂಡಕ್ಕೆ ನೂತನ ಕೋಚ್ ನೇಮಿಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇ 7ನ್ನು ಆಂತರಿಕ ಗಡುವಾಗಿ ನಿಗದಿಪಡಿಸಿದೆ. ಎಎಫ್‌ಸಿ ಏಶ್ಯಕಪ್ ಟೂರ್ನಿಯಿಂದ ಭಾರತ ಸೋತು ಹೊರ ಬಿದ್ದ ನಂತರ ಅಂದಿನ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ರಾಜೀನಾಮೆ ನೀಡಿದ್ದು, ಅಂದಿನಿಂದ ಈ ಹುದ್ದೆ ಖಾಲಿ ಇದೆ.

ಕೋಚ್ ಹುದ್ದೆಗೆ ಸಿದ್ಧಪಡಿಸಿದ ಆಕಾಂಕ್ಷಿಗಳ ಕಿರುಪಟ್ಟಿಯ ಬಗ್ಗೆ ಚರ್ಚಿಸಲು ಎಐಎಫ್‌ಎಫ್ ಮುಂದಿನ ಸೋಮವಾರ ಸಭೆ ನಿಗದಿಪಡಿಸಿದೆ. ಕೋಚ್ ಹುದ್ದೆಗೆ ಮೊದಲು ಸುಮಾರು 250 ಅರ್ಜಿಗಳು ಬಂದಿದ್ದವು. ಅವುಗಳನ್ನು 38ಕ್ಕೆ ಇಳಿಸಿ ಕಿರುಪಟ್ಟಿಯನ್ನು ತಯಾರಿಸಲಾಗಿದ್ದು, ಎಐಎಫ್‌ಎಫ್ ತನ್ನ ತಾಂತ್ರಿಕ ಸಮಿತಿಗೆ ಕಳುಹಿಸಿಕೊಟ್ಟಿದೆ.

‘‘ ಮೇ 7ಕ್ಕೆ ಕೋಚ್ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳುವ ನಿರೀಕ್ಷೆಯಿದ್ದು, ಇದು ನಾವು ವಿಧಿಸಿಕೊಂಡ ಆಂತರಿಕ ಗಡುವು. ಆದಾಗ್ಯೂ ಸೋಮವಾರ ತಾಂತ್ರಿಕ ಸಮಿತಿಯ ಸಭೆಯ ಚರ್ಚೆಯನ್ನು ಅವಲಂಬಿಸಿ ದಿನಾಂಕವನ್ನು ಮುಂದೂಡುವ ಸಾಧ್ಯತೆಯೂ ಇದೆ’’ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಎ.15ರಂದು ತಾಂತ್ರಿಕ ಸಮಿತಿಯ ಸಭೆಯ ಬಳಿಕ 7 ಅಥವಾ 8 ಅಭ್ಯರ್ಥಿಗಳ ಮತ್ತೊಂದು ಕಿರುಪಟ್ಟಿಯನ್ನು ಸಂದರ್ಶನಕ್ಕಾಗಿ ತಯಾರಿಸಲಾಗುತ್ತದೆ. ಎಲ್ಲ ಅಂದುಕೊಂಡಂತೆ ನಡೆದರೆ ಬೆಂಗಳೂರು ಎಫ್‌ಸಿ ಮಾಜಿ ಕೋಚ್ ಆಲ್ಬರ್ಟ್ ರೋಕಾ ಹಾಗೂ ಸ್ವೀಡನ್ ತಂಡದ ಮ್ಯಾನೇಜರ್ ಸ್ವೆನ್ ಗೊರಾನ್ ಎರಿಕ್ಸನ್ ಹೆಸರುಗಳು ಅಂತಿಮಗೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News