'ಕಳಪೆ ಎಂಪಿ ನಳಿನ್‌ಗಿಂತ ಮಿಥುನ್ ಸಮರ್ಥ ಎಂದು ಮತದಾರರು ನಿರ್ಧರಿಸಿದ್ದಾರೆ'

Update: 2019-04-13 11:54 GMT
ಎ.ಸಿ.ವಿನಯರಾಜ್

17ನೆ ಲೋಕಸಭಾ ಚುನಾವಣೆಗೆ ಇನ್ನೇನೋ ನಾಲ್ಕು ದಿನ ಬಾಕಿ ಉಳಿದಿವೆ. ಬಿಸಿಲ ಧಗೆಯ ಮಧ್ಯೆ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಕಂಡು ಬರುತ್ತಿದೆ. ಸಮರೋಪಾದಿಯಲ್ಲಿ ನಡೆಯುತ್ತಿರುವ ಪ್ರಚಾರದೊಂದಿಗೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಆ ಹಿನ್ನಲೆಯಲ್ಲಿ ಮಂಗಳೂರಿನ ಯುವ ನ್ಯಾಯವಾದಿ, ಮಾಜಿ ಕಾರ್ಪೊರೇಟರ್, ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ. ವಿನಯರಾಜ್ ಅವರೊಂದಿಗೆ ‘ವಾರ್ತಾಭಾರತಿ’ ಮಾತುಕತೆ ನಡೆಸಿದಾಗ....

ನಿಮ್ಮ ಪಕ್ಷದ ಪ್ರಚಾರ ಕಾರ್ಯ ಹೇಗೆ ಸಾಗುತ್ತಿದೆ ?

ನಮ್ಮ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುಂಪಾಗಿ ಪ್ರತಿಯೊಂದು ಮನೆಗೂ ಭೇಟಿ ನೀಡಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸರಕಾರದ ವೈಫಲ್ಯ ಹಾಗೂ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಅದಲ್ಲದೆ ಅಲ್ಲಲ್ಲಿ ಕಾರ್ನರ್ ಮೀಟಿಂಗ್ ಮಾಡಿ ಮತದಾರರಲ್ಲಿ ಹುರುಪು ಮೂಡಿಸುತ್ತಿದ್ದಾರೆ.

ಮತದಾರರ ಪ್ರತಿಕ್ರಿಯೆ ಹೇಗಿದೆ ?

ಈ ಬಾರಿ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ಕಳೆದ 10 ವರ್ಷದಿಂದ ನಳಿನ್ ಮತ್ತು 28 ವರ್ಷದಿಂದ ಬಿಜೆಪಿಯಿಂದ ಆಯ್ಕೆಗೊಂಡ ಸಂಸದರು ಈ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯವಾಗಿದೆ. ಅದನ್ನು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಎಳೆಎಳೆಯಾಗಿ ವಿವರಿಸುತ್ತಿದ್ದಾರೆ. ಮತದಾರರಿಗೂ ವಸ್ತುಸ್ಥಿತಿ ಮನವರಿಕೆಯಾಗಿದೆ. ಜನರು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆಯೇ ವಿನಃ ಸಮಾಜವನ್ನು ಹಾಳುಗೆಡಹುವ ರಾಜಕಾರಣವನ್ನಲ್ಲ. ಹಾಗಾಗಿ ಈ ಬಾರಿ ಮತದಾರರು ಅದರಲ್ಲೂ ಯುವ ಮತದಾರರ ಒಲವು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಇದೆ.

ತಟಸ್ಥ ಮತದಾರರ ಮನ ಗೆಲ್ಲಲು ಏನು ಮಾಡುವಿರಾ ?

ಹೌದು.. ಪ್ರತಿಯೊಂದು ಚುನಾವಣೆಯಲ್ಲೂ ಪ್ರತೀ ಕ್ಷೇತ್ರದಲ್ಲೂ ಸಾಕಷ್ಟು ಸಂಖ್ಯೆಯ ತಟಸ್ಥ ಮತದಾರರು ಇರುತ್ತಾರೆ. ಅದರಲ್ಲೂ ಮೊದಲ ಬಾರಿಗೆ ಮತ ಚಲಾಯಿಸಲು ಅಣಿಯಾದವರಿಗೆ ಯಾರು ಸಮರ್ಥ ಅಭ್ಯರ್ಥಿ ? ಯಾರಿಗೆ ಮತ ಹಾಕಬೇಕು ಎಂದು ತಿಳಿದಿರುವುದಿಲ್ಲ. ಅದನ್ನು ಮನಗಂಡ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಇಂತಹ ಯುವ ಮತ್ತು ತಟಸ್ಥ ಮತದಾರರ ಮನ ಒಲಿಸುತ್ತಿದ್ದಾರೆ. ಕೇವಲ ರಾಜಕೀಯಕ್ಕಾಗಿ ಮತೀಯ ಭಾವನೆಯ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಬಿಜೆಪಿಗರ ಮನಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳ ಮೂಲಕವೂ ತಟಸ್ಥ ಮತ್ತು ಯುವ ಮತದಾರರ ಮನ ಗೆಲ್ಲಲ್ಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.

ಈ ಬಾರಿ ಕಾಂಗ್ರೆಸ್‌ಗೆ ಗೆಲ್ಲಲು ಇರುವ ಕೊನೆಯ ಅವಕಾಶ. ಇದರಲ್ಲಿ ವಿಫಲರಾದರೆ ಮತ್ತೆಂದೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸದು ಎಂಬ ಅಭಿಪ್ರಾಯವಿದೆ. ಏನು ಹೇಳುವಿರಿ ?

ಕಳೆದ 28 ವರ್ಷದಿಂದ ಈ ಕ್ಷೇತ್ರ ಬಿಜೆಪಿಯ ತೆಕ್ಕೆಯಲ್ಲಿದೆ. ಬಿಜೆಪಿಯಿಂದ ಈ ಕ್ಷೇತ್ರದ ಮೂಲಕ ಮೂವರು ಲೋಕಸಭೆಗೆ ಪ್ರವೇಶಿಸಿದ್ದರು. ಕಾಂಗ್ರೆಸ್‌ನಿಂದ ಇಬ್ಬರು ಹಿರಿಯ ನಾಯಕರು ಸ್ಪರ್ಧಿಸಿ ಸೋಲು ಕಂಡಿದ್ದರು. ಇದನ್ನೆಲ್ಲಾ ತುಲನೆ ಮಾಡಿದ ಪಕ್ಷದ ಹೈಕಮಾಂಡ್ ಟಿಕೆಟ್‌ಗಾಗಿ ಸಾಕಷ್ಟು ಪೈಪೋಟಿ ಇದ್ದರೂ ಕೂಡ ಎಲ್ಲರೂ ಮೆಚ್ಚುವಂತಹ, ಎಲ್ಲರಿಗೂ ಸಮರ್ಥ ಎಂದು ಕಂಡು ಬಂದ ಯುವ ನಾಯಕ ಮಿಥುನ್ ರೈಯನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ದ.ಕ. ಜಿಲ್ಲೆ ಅಭಿವೃದ್ಧಿಯಾಗದು ಎಂಬುದು ಮತದಾರರಿಗೆ ಮನವರಿಕೆಯಾಗಿದೆ. ಹಾಗಾಗಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ವಿಜಯದ ಪತಾಕೆ ಹಾರಿಸಲಿದೆ. ಸ್ವತಃ ಬಿಜೆಪಿಗರಿಂದಲೇ ‘ಕಳಪೆ ಎಂಪಿ’ ಎಂದು ಟೀಕೆಗೊಳಗಾಗಿರುವ ನಳಿನ್‌ಗಿಂತ ಮಿಥುನ್ ರೈ ಎಲ್ಲಾ ವಿಧದಿಂದಲೂ ಸಮರ್ಥ ಎಂದು ನಿರ್ಧರಿಸಿರುವ ಮತದಾರರು ಖಂಡಿತಾ ಮಿಥುನ್‌ರನ್ನು ಪಾರ್ಲಿಮೆಂಟ್‌ಗೆ ಕಳುಹಿಸಿಕೊಡಲಿದ್ದಾರೆ ಎಂಬ ವಿಶ್ವಾಸ ನನಗಿದೆ.

ವ್ಯಕ್ತಿ ಆಧಾರಿತ ಪ್ರಚಾರದ ಬಗ್ಗೆ ಏನು ಹೇಳುವಿರಿ ?

ಅದು ಬಿಜೆಪಿಗೆ ತಿರುಗುಬಾಣವಾಗುವುದರಲ್ಲಿ ಸಂಶಯವಿಲ್ಲ. ಹಿಂದೆ ಇಂದಿರಾ ಗಾಂಧಿ ಅವರನ್ನು ಕಾಂಗ್ರೆಸ್ ಹೆಚ್ಚು ಫೋಕಸ್ ಮಾಡತೊಡಗಿದಾಗ ಈ ಬಿಜೆಪಿಗರು ಟೀಕಿಸುತ್ತಿದ್ದರು. ಈಗ ಬಿಜೆಪಿಗರು ಮೋದಿಯ ಜಪ ಮಾಡುತ್ತಿದ್ದಾರೆ. ಪಕ್ಷ ಮತ್ತು ಅಭ್ಯರ್ಥಿಗಿಂತ ‘ಮೋದಿ’ಯೇ ಮುಖ್ಯವಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದು ಅಪಾಯಕಾರಿ ಬೆಳವಣಿಗೆಯಾಗಿದೆ. ಈಗಾಗಲೆ ಮೋದಿ ವಿರುದ್ಧ ಆ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಕ್ರಮೇಣ ಅದು ಭುಗಿಲೇಳಲಿದೆ. ಹಾಗಾಗಿ ವ್ಯಕ್ತಿ ಆಧಾರಿತ ಪ್ರಚಾರ ಹೆಚ್ಚು ಕಾಲ ಬಾಳದು.

ಜೆಡಿಎಸ್, ಸಿಪಿಎಂ, ಸಿಪಿಐ ಪಕ್ಷೀಯರ ಸಹಕಾರ ಹೇಗಿದೆ ?

ಹಲವು ಕಡೆ ಅವರು ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಕಡೆ ಅವರು ಪ್ರತ್ಯೇಕವಾಗಿ ಪ್ರಚಾರ ಆರಂಭಿಸಿದ್ದಾರೆ. ಮತೀಯವಾದಿ ಬಿಜೆಪಿಯನ್ನು ಸೋಲಿಸಲು ಪ್ರಬಲ ಜಾತ್ಯತೀತ ಪಕ್ಷವಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಗೆಲ್ಲಬೇಕು ಎಂಬ ಆಶಾಭಾವನೆಯೊಂದಿಗೆ ಅವರು ಕೆಲಸ ಮಾಡುತ್ತಿದ್ದಾರೆ.

ಎಸ್‌ಡಿಪಿಐ ಸ್ಪರ್ಧೆಯ ಬಗ್ಗೆ?

ಅದು ಜಾತಿ ಆಧಾರಿತ ಪಕ್ಷವಾಗಿದೆ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದಕ್ಕೆ ಅದು ಹೆಚ್ಚು ಆದ್ಯತೆ ನೀಡುತ್ತಿದೆ. ಎಸ್‌ಡಿಪಿಐ ಅಭ್ಯರ್ಥಿಗೆ ಮತ ಹಾಕಿದರೆ ಅದು ಬಿಜೆಪಿಗೆ ಲಾಭ ತಂದುಕೊಡಲಿದೆ ಎಂದು ಸ್ವತಃ ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಅಮೂಲ್ಯವಾದ ಮತವನ್ನು ಎಸ್‌ಡಿಪಿಐ ಅಭ್ಯರ್ಥಿಗೆ ಚಲಾಯಿಸಿ ವ್ಯರ್ಥ ಮಾಡುವ ಬದಲು ಗೆಲ್ಲುವ ಅಭ್ಯರ್ಥಿ ಮಿಥುನ್‌ಗೆ ಹಾಕಲು ಮುಂದಾಗಿದ್ದಾರೆ.

ಕ್ರೈಸ್ತರ ಸಾಕಷ್ಟು ಮತಗಳು ಚಲಾವಣೆಯಾಗದಿರುವ ಬಗ್ಗೆ....?

ಮಂಗಳೂರಿನ ಕ್ರೈಸ್ತರು ಮುಂಬೈ, ದಿಲ್ಲಿ, ಬೆಂಗಳೂರು ಅಲ್ಲದೆ ವಿದೇಶದಲ್ಲಿ ಕೂಡ ನೆಲೆಸಿದ್ದಾರೆ. ಚುನಾವಣೆಯ ಸಂದರ್ಭ ಅವರು ಅಲ್ಲೇ ಇರುವ ಮೂಲಕ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡಿರುವ ನಾವು ಊರಲ್ಲಿಲ್ಲದ ಕ್ರೈಸ್ತ ಮತದಾರರನ್ನು ಸಂಪರ್ಕಿಸಿ ಮತದಾನದಲ್ಲಿ ಪಾಲ್ಗೊಳ್ಳಲು ಭಿನ್ನವಿಸಿಕೊಂಡಿದ್ದೇವೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಈ ಬಾರಿಯ ಚುನಾವಣೆಯು ದ.ಕ.ಜಿಲ್ಲೆಯ ಮಟ್ಟಿಗೆ ಪ್ರಮುಖ ಮತ್ತು ನಿರ್ಣಾಯಕವಾದ ಕಾರಣ ಎಲ್ಲರನ್ನೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಪ್ರಯತ್ನವೂ ಭರದಿಂದ ಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News