ವಾರಣಾಸಿಯಿಂದ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ಸ್ಪರ್ಧೆ?

Update: 2019-04-13 12:40 GMT

ಹೊಸದಿಲ್ಲಿ: ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ (ಪೂರ್ವ) ಇದರ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆಯೆಂದು ಕೆಲ ವರದಿಗಳು ತಿಳಿಸಿವೆ.

ಪ್ರಿಯಾಂಕ ಅವರು ಮೋದಿಯ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿದ್ದಾರೆನ್ನಲಾಗಿದ್ದು ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದೆ. ವಾರಣಾಸಿ ಕ್ಷೇತ್ರಕ್ಕೆ ಚುನಾವಣೆ ಮೇ 19ರಂದು ನಡೆಯಲಿದೆ.

ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರಿಯಾಂಕ ಅವರನ್ನು ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆನ್ನಲಾಗಿದ್ದರೂ ಪಕ್ಷದ ಹಿರಿಯ ನಾಯಕರು ಇದನ್ನು ನಿರಾಕರಿಸಿದ್ದರು. ಆದರೆ ಪ್ರಿಯಾಂಕ ಒಪ್ಪಿದರೆ ಈ ಬೇಡಿಕೆಯನ್ನು ಪರಿಗಣಿಸಬಹುದೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು.

ನಾಮಪತ್ರ ಸಲ್ಲಿಕೆಗಿರುವ ಅಂತಿಮ ದಿನಾಂಕದಂದು ಪ್ರಿಯಾಂಕ ಅವರನ್ನು ನಾಮಪತ್ರ ಸಲ್ಲಿಸುವಂತೆ ಮಾಡಿ ಬಿಜೆಪಿಗೆ ಅಚ್ಚರಿ ನೀಡುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕಿದೆ ಎನ್ನಲಾಗಿದೆ.

ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶಕ್ಕೆ ತಮ್ಮ ಮೊದಲ ಭೇಟಿಯ ವೇಳೆ ಪ್ರಿಯಾಂಕ ಅವರು ವಾರಣಾಸಿಯ ಅಸ್ಸೀ ಘಾಟ್ ನಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಕ್ಕೆ ಮೋದಿ ಸರಕಾರದ ವಿರುದ್ಧ  ಕಿಡಿ ಕಾರಿದ್ದರು. ಪ್ರಿಯಾಂಕ ಅವರು ಮೋದಿಯನ್ನು ನೇರವಾಗಿ ಎದುರಿಸಲು ಸಿದ್ಧರಿದ್ದಾರೆಂದು ತೋರ್ಪಡಿಸುವುದಕ್ಕಾಗಿಯೇ "ಸಂಚಿ ಬಾತ್, ಪ್ರಿಯಾಂಕ ಕೆ ಸಾಥ್'' ಎಂಬ ಈ ಕಾರ್ಯಕ್ರಮ ಆಯೋಜಿಸಲಗಿತ್ತೆಂದು ಹೇಳಲಾಗುತ್ತಿದೆ.

ಚುನಾವಣೆ ಸ್ಪರ್ಧಿಸುವಂತೆ ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದಾಗ ವಾರಣಾಸಿಯಿಂದ ಸ್ಪರ್ಧಿಸಬೇಕೇ ಎಂದು ಪ್ರಿಯಾಂಕ ಪ್ರಶ್ನಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News