ಹಲ್ಲುಗಳ ರಕ್ಷಣೆಗಾಗಿ ನೀವು ಪಾಲಿಸಲೇಬೇಕಾದ ಸೂತ್ರಗಳು

Update: 2019-04-13 13:25 GMT

ನಿಮ್ಮ ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ದಿನಕ್ಕೆರಡು ಬಾರಿ ಹಲ್ಲುಗಳನ್ನು ಉಜ್ಜುವುದು ಏಕೈಕ ಸೂತ್ರವಲ್ಲ. ಬಿಳಿಯ ಮುತ್ತಿನಂತಹ ಹಲ್ಲುಗಳನ್ನು ಹೊಂದಿರಲು ಕೇವಲ ಬ್ರಷ್ ಮಾಡುವುದು ಸಾಲದು. ಹಲ್ಲುಗಳು ಇನ್ನೂ ಹಲವಾರು ಅಗತ್ಯಗಳನ್ನು ಬೇಡುತ್ತವೆ. ಸುಂದರ ಮುಗುಳ್ನಗು ಸದಾ ನಿಮ್ಮದಾಗಿರಬೇಕೆಂದರೆ ನೀವು ಕೆಲವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

► ವಿಳಂಬವಾಗುವ ಮುನ್ನ ಫ್ಲಾಸ್ ಮಾಡಿ

ನೀವು ಹಲ್ಲುಗಳನ್ನು ಬ್ರಷ್ ಮಾಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಸೂಕ್ಷ್ಮಜೀವಿಗಳು ನಿವಾರಣೆಯಾಗುತ್ತವೆ ನಿಜ, ಆದರೆ ಈಗಲೂ ಹಲ್ಲುಗಳ ನಡುವೆ ಸೂಕ್ಷ್ಮ್ಮಜೀವಿಗಳು ಉಳಿದುಕೊಂಡಿರುತ್ತವೆ. ಫ್ಲಾಸಿಂಗ್ ಮಾಡಲು ಹೆಚ್ಚೆಂದರೆ ಒಂದು ನಿಮಿಷ ಬೇಕಾಗಬಹುದು. ಅದು ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಎಲ್ಲ ಸೂಕ್ಷ್ಮಜೀವಿಗಳನ್ನು ಮತ್ತು ಆಹಾರದ ಕಣಗಳನ್ನು ತೆಗೆಯುತ್ತದೆ. ಫ್ಲಾಸ್ ಅಥವಾ ವಿಶೇಷವಾದ ನಯವಾದ ದಾರವು ಬ್ರಷ್‌ಗೆ ಸಾಧ್ಯವಿಲ್ಲದ ಜಾಗಗಳನ್ನೂ ತಲುಪುತ್ತದೆ. ಪ್ರತಿದಿನ ಬ್ರಷ್‌ನಿಂದ ಹಲ್ಲುಗಳನ್ನು ಉಜ್ಜಿದ ಬಳಿಕ ಫ್ಲಾಸಿಂಗ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

► ಹಲ್ಲುಜ್ಜುವುದು ಕಾಟಾಚಾರವಾಗದಿರಲಿ

ಇಂದಿನ ಗಡಿಬಿಡಿಯ ಯುಗದಿಂದಾಗಿ ನಾವು ಬಹಳಷ್ಟು ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳುವಂತಾಗಿದೆ. ಇದು ನಮ್ಮ ಹಲ್ಲುಗಳ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಿದೆ ಎನ್ನಬಹುದು. ಕೆಲವರು ಸಮಯದ ಅಭಾವದಿಂದ ಕಾಟಾಚಾರಕ್ಕೆ ಹಲ್ಲುಜ್ಜುವ ಶಾಸ್ತ್ರವನ್ನು ಮಾಡುತ್ತಾರೆ. ಹಲ್ಲುಗಳನ್ನು ಸರಿಯಾಗಿ ಉಜ್ಜಲು ಸ್ವಲ್ಪ ಹೆಚ್ಚಿನ ಸಮಯವನ್ನು ವ್ಯಯಿಸಲೇಬೇಕು. ಸರಿಯಾದ ರೀತಿಯಲ್ಲಿಯೇ ಹಲ್ಲುಗಳನ್ನು ಉಜ್ಜಬೇಕು. ಹೆಚ್ಚಿನವರು ಎದುರಿನ ಹಲ್ಲುಗಳನ್ನಷ್ಟೇ ಉಜ್ಜುತ್ತಾರೆ,ಆದರೆ ಇಡೀ ಬಾಯಿಯನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ನಿಮ್ಮ ಎಲ್ಲ ಹಲ್ಲುಗಳನ್ನೂ ಸರಿಯಾಗಿ ಉಜ್ಜಿಕೊಂಡು ಬಳಿಕ ಫ್ಲಾಸಿಂಗ್ ಮಾಡಿ.

 ► ಧೂಮಪಾನ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ

ಹೆಚ್ಚಿನ ಧೂಮಪಾನಿಗಳು ವಾಸನೆಯನ್ನು ಮುಚ್ಚಿಡಲು ಮಿಂಟ್ ಅಥವಾ ಮೌತ್ ಫ್ರೆಷ್ನರ್‌ಗಳನ್ನು ಬಳಸುತ್ತಾರೆ. ಆದರೆ ಧೂಮಪಾನ ಮಾಡುವುದನ್ನು ದಂತವೈದ್ಯರು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಧೂಮಪಾನ ಶ್ವಾಸಕೋಶಗಳಿಗೆ ಮಾತ್ರ ಹಾನಿಯನ್ನುಂಟು ಮಾಡುವುದಿಲ್ಲ,ಅದು ಹಲ್ಲುಗಳನ್ನೂ ಕೆಡಿಸುತ್ತದೆ. ಅದು ಹಲವಾರು ದಂತ ಸಮಸ್ಯೆಗಳಿಗೆ ಕಾರಣವಾಗಬಲ್ಲುದು. ಹಲ್ಲುಗಳ ಮೇಲೆ ಹಳದಿ ಕಲೆಗಳು,ದಂತಕ್ಷಯ,ವಸಡು ರೋಗಗಳು,ಅಷ್ಟೇ ಏಕೆ...ಬಾಯಿ ಕ್ಯಾನ್ಸರ್‌ಗೂ ಅದು ಕಾರಣವಾಗುತ್ತದೆ. ಯಾವುದೇ ದಂತರೋಗಗಳನ್ನು ತಡೆಯಲು ಧೂಮಪಾನದ ದುರಭ್ಯಾಸವನ್ನು ತಕ್ಷಣ ವರ್ಜಿಸುವುದು ಅತ್ಯಗತ್ಯ.

 ►ದಂತವೈದ್ಯರು ನಿಮ್ಮ ತಲೆನೋವುಗಳನ್ನೂ ನಿವಾರಿಸಬಲ್ಲರು

ವಿನಾಕಾರಣ ತಲೆನೋವುಗಳನ್ನು ನೀವು ಅನುಭವಿಸುತ್ತಿದ್ದರೆ ನಿಮ್ಮ ದಂತ ಸಮಸ್ಯೆಗಳು ಅದಕ್ಕೆ ಕಾರಣವಾಗಿರಬಹುದು. ಹಲವಾರು ದಂತ ಸಮಸ್ಯೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ತಲೆನೋವುಗಳನ್ನು ತರುತ್ತವೆ. ಬುದ್ಧಿಹಲ್ಲು ಅಥವಾ ಜ್ಞಾನದಂತವು ಮೊಳೆಯುವಾಗ ತಲೆನೋವುಗಳು ಅನುಭವವಾಗಬಹುದು. ಉರಿಯೂತಕ್ಕೆ ಕಾರಣವಾಗುವ ದವಡೆ ಹಲ್ಲುಗಳಲ್ಲಿಯ ಸೋಂಕಿನಂತಹ ಇತರ ಸಮಸ್ಯೆಗಳೂ ತಲೆನೋವಿಗೆ ಕಾರಣವಾಗುತ್ತವೆ. ಇಂತಹ ಸ್ಥಿತಿಯಲ್ಲಿ ದಂತವೈದ್ಯರನ್ನು ಸಂಪರ್ಕಿಸಿದರೆ ಅವರು ಸೂಕ್ತ ಪರಿಹಾರವನ್ನು ಸೂಚಿಸುತ್ತಾರೆ.

►ನಿಮ್ಮ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ

ಹೆಚ್ಚಿನ ಜನರು ತೀವ್ರ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುವವರೆಗೂ ತಮ್ಮ ದಂತವೈದ್ಯರನ್ನು ಭೇಟಿಯಾಗುವ ಗೋಜಿಗೇ ಹೋಗುವುದಿಲ್ಲ. ಆದರೆ ನಿಮ್ಮ ಹಲ್ಲುಗಳ ಆರೋಗ್ಯವು ಕೊಂಚ ಹೆಚ್ಚುವರಿ ಗಮನವನ್ನು ಬೇಡುತ್ತದೆ. ನೀವು ನಿಯಮಿತವಾಗಿ ನಿಮ್ಮ ದಂತವೈದ್ಯರನ್ನು ಭೇಟಿಯಾಗಲೇಬೇಕು. ದಂತವೈದ್ಯರನ್ನು ಭೇಟಿಯಾಗಲು ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳುವವರೆಗೆ ಕಾಯಬೇಡಿ. ವರ್ಷಕ್ಕೆ ಕನಿಷ್ಠ ಎರಡು ಸಲವಾದರೂ ದಂತವ್ಯೆದ್ಯರನ್ನು ಭೇಟಿಯಾಗುವುದನ್ನು ರೂಢಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News