ವಿರಾಟ್, ಡಿವಿಲಿಯರ್ಸ್ ಆಕರ್ಷಕ ಬ್ಯಾಟಿಂಗ್: ಆರ್‌ಸಿಬಿಗೆ ಮೊದಲ ಗೆಲುವಿನ ಸಿಂಚನ

Update: 2019-04-13 18:37 GMT

ಮೊಹಾಲಿ, ಎ.14: ನಾಯಕ ವಿರಾಟ್ ಕೊಹ್ಲಿ ಹಾಗೂ ಡಿವಿಲಿಯರ್ಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಲ್ಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಶನಿವಾರದ ಎರಡನೇ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯ ಐಪಿಎಲ್ ಮೊದಲ ಗೆಲುವು ದಾಖಲಿಸಿದೆ. 8 ವಿಕೆಟ್‌ಗಳಿಂದ ಪಂಜಾಬ್ ತಂಡವನ್ನು ಆರ್‌ಸಿಬಿ ಮಣಿಸಿತು. ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 174 ರನ್‌ಗುರಿ ಬೆನ್ನಟ್ಟಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 2 ವಿಕೆಟ್‌ಗೆ 174 ರನ್ ಗಳಿಸಿತು.

ತಂಡದ ಪರ ಪಾರ್ಥಿವ್ ಪಟೇಲ್ (19, 9 ಎಸೆತ, 4 ಬೌಂಡರಿ) ಹಾಗೂ ವಿರಾಟ್ ಕೊಹ್ಲಿ (67, 53 ಎಸೆತ, 8 ಬೌಂಡರಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 43 ರನ್ ಸೇರಿಸಿ ಉತ್ತಮ ಬುನಾದಿ ಒದಗಿಸಿದರು. ಪಾರ್ಥಿವ್ ಅವರು ಅಶ್ವಿನ್‌ರ ಸ್ಪಿನ್ ಬಲೆಗೆ ಬಿದ್ದರು. ಆ ಬಳಿಕ ಜೊತೆಗೂಡಿದ ಕೊಹ್ಲಿ ಹಾಗೂ ಡಿವಿಲಿಯರ್ಸ್(ಅಜೇಯ 59, 38 ಎಸೆತ, 5 ಬೌಂಡರಿ, 2 ಸಿಕ್ಸರ್ ) ಪಂಜಾಬ್ ಬೌಲರ್‌ಗಳಿಗೆ ಬೆವರಿಳಿಸಿದರು. 2ನೇ ವಿಕೆಟ್ ಜೊತೆಯಾಟಕ್ಕೆ 85 ರನ್ ಸೇರಿಸಿದರು. ಈ ಹಂತದಲ್ಲಿ ಕೊಹ್ಲಿ ಅವರು ವೇಗಿ ಶಮಿಗೆ ವಿಕೆಟ್ ಒಪ್ಪಿಸಿದರು. ನಂತರ ಮಾರ್ಕಸ್ ಸ್ಟೋನಿಸ್ (28, 16 ಎಸೆತ, 4 ಬೌಂಡರಿ ) ಹಾಗೂ ಡಿವಿಲಿಯರ್ಸ್ ಗೆಲುವಿನ ವಿಧಾನ ಪೂರ್ಣಗೊಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಕ್ರಿಸ್ ಗೇಲ್ (99, 64 ಎಸೆತ, 10 ಬೌಂಡರಿ, 5 ಸಿಕ್ಸರ್) ಹಾಗೂ ಕೆ.ಎಲ್.ರಾಹುಲ್ (18, 15 ಎಸೆತ, 2 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿದರು. ರಾಹುಲ್ ಮೊದಲನೆಯವರಾಗಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಮಾಯಾಂಕ್ ಅಗರ್ವಾಲ್ (15, 9 ಎಸೆತ, 1 ಬೌಂಡರಿ, 1 ಸಿಕ್ಸರ್) ಶೀಘ್ರ ವಿಕೆಟ್ ಒಪ್ಪಿಸಿದರು. ಸರ್ಫರಾಝ್ ಖಾನ್ (15, 13 ಎಸೆತ, 1 ಬೌಂಡರಿ, 1 ಸಿಕ್ಸರ್) ಕೂಡ ಹೆಚ್ಚು ಹೊತ್ತು ಗೇಲ್‌ಗೆ ಸಾಥ್ ನೀಡಲಿಲ್ಲ. ಸ್ಯಾಮ್ ಕರನ್ (1) ಮೊಯಿನ್ ಅಲಿ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಗೇಲ್ ಹಾಗೂ ಮಂದೀಪ್ ಸಿಂಗ್ (18, 16 ಎಸೆತ, 1 ಬೌಂಡರಿ) ಮುರಿಯದ 5ನೇ ವಿಕೆಟ್ ಜತೆಯಾಟದಲ್ಲಿ 60 ರನ್ ಸೇರಿಸಿದರು. ಕೊನೆಯ ಎಸೆತದಲ್ಲಿ ಗೇಲ್ ಶತಕಕ್ಕೆ 5 ರನ್ ಬೇಕಿತ್ತು. ಮುಹಮ್ಮದ್ ಸಿರಾಜ್ ಎಸೆದ ಈ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಗೇಲ್ 1 ರನ್‌ನಿಂದ ಶತಕ ತಪ್ಪಿಸಿಕೊಂಡರು.

ಆರ್‌ಸಿಬಿ ಪರ ಚಹಾಲ್ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News