ಬಾಕ್ಸಿಂಗ್ ಆಯ್ಕೆಗೆ ಮುಹಮ್ಮದ್ ಅಲಿ ಸ್ಫೂರ್ತಿ: ಮೇರಿ ಕೋಮ್

Update: 2019-04-13 18:43 GMT

ಪಣಜಿ, ಎ.14: ಬಾಕ್ಸಿಂಗ್ ದಂತಕತೆ ಅಲಿಯವರು ಸ್ಪರ್ಧಿಸುವುದನ್ನು ಟಿವಿಯಲ್ಲಿ ಗಮನಿಸಿ ಸ್ಫೂರ್ತಿಗೊಂಡು ಬಾಕ್ಸಿಂಗ್ ಆಟ ಆಯ್ದುಕೊಂಡೆ ಎಂದು ಆರು ಬಾರಿಯ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಮೇರಿಕೋಮ್ ಹೇಳಿದ್ದಾರೆ.

ಶನಿವಾರ ಇಲ್ಲಿ ನಡೆಯುತ್ತಿರುವ ‘‘ಗೋವಾ ಫೆಸ್ಟ್ 2019’’ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು ‘‘ಆರಂಭದಲ್ಲಿ ಜಾಕಿಚಾನ್‌ರ ಆ್ಯಕ್ಷನ್ ಚಿತ್ರಗಳು ಹಾಗೂ ಬಾಲಿವುಡ್ ಚಿತ್ರಗಳಲ್ಲಿ ಅಕ್ಷಯ್‌ಕುಮಾರ್‌ರ ಫೈಟ್ ದೃಶ್ಯಗಳು ನನ್ನ ಸ್ಫೂರ್ತಿಯನ್ನು ಹೆಚ್ಚಿಸಿದವು ಎಂದು ಮಣಿಪುರ ಮೂಲದ ಬಾಕ್ಸಿಂಗ್ ಪಟು ಹೇಳಿದ್ದಾರೆ.

‘‘ಟಿವಿಯಲ್ಲಿ ಮುಹಮ್ಮದ್ ಅಲಿ ಅವರ ಬಾಕ್ಸಿಂಗ್ ದೃಶ್ಯಗಳನ್ನು ನೋಡಿ ನನಗನಿಸಿದ್ದು, ಪುರುಷ ಫೈಟ್ ಮಾಡಬಹುದಾದರೆ ಮಹಿಳೆಗೇಕೆ ಸಾಧ್ಯವಾಗಬಾರದು’’ ಎಂದು ಮೇರಿ ಹೇಳಿದರು.

ತಾನು ಬಾಕ್ಸಿಂಗ್‌ನ್ನು ಆಯ್ಕೆ ಮಾಡಿಕೊಂಡಾಗ ಜನರು ತುಂಬಾ ಋಣಾತ್ಮಕವಾಗಿ ಮಾತನಾಡು ತ್ತಿದ್ದರು. ಮದುವೆಗಿಂತ ಮೊದಲು ಹೀಗೆ ನಿರ್ಧಾರ ತೆಗೆದುಕೊಳ್ಳುವುದು ಸರಳ ಎನ್ನಿಸಬಹುದು; ಆದರೆ ಮದುವೆಯ ಬಳಿಕ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಅವರು ತಿಳಸಿದರು.

ಸಂವಾದಕ್ಕಿಂತ ಮುನ್ನ ಮಾತನಾಡಿದ್ದ ಅವರು, ‘‘ನಾವು ಎಲ್ಲವನ್ನು ಹೊಂದಿದ್ದೇವೆ ಎಂದು ಹೇಳಬಲ್ಲೆ. ಆದರೆ ಚಾಂಪಿಯನ್‌ಗಳು ನಮ್ಮಲ್ಲಿ ಇಲ್ಲ. ಅವರು ನೂತನ ಚಾಂಪಿಯನ್‌ಗಳನ್ನು ತಯಾರುಗೊಳಿಸಿಲ್ಲ. ಅದೇ ನಮ್ಮನ್ನು ಕಾಡುತ್ತಿರುವ ಕೊರತೆ’’ ಎಂದು ಮೇರಿ ಹೇಳಿದರು.

ಇದಕ್ಕೆ ತಾನು ಸರಕಾರ, ಕಂಪೆನಿಗಳು ಹಾಗೂ ಒಕ್ಕೂಟಗಳನ್ನು ದೂರುವುದಿಲ್ಲ. ಆದರೆ ಅಥ್ಲೀಟ್‌ಗಳನ್ನು ಹೊಣೆಯಾಗಿಸುತ್ತೇನೆ. ಅವರು ಇನ್ನಷ್ಟು ಕಲಿಯಬೇಕು ಎಂದು ಇದೇ ವೇಳೆ ಅವರು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News