ಚೆನ್ನೈ ಗೆಲುವಿನ ಓಟ ಅಬಾಧಿತ

Update: 2019-04-14 15:11 GMT

ಕೋಲ್ಕತಾ, ಎ.14: ಸ್ಪಿನ್ನರ್ ಇಮ್ರಾನ್ ತಾಹಿರ್ ಸ್ಪಿನ್ ಮೋಡಿ(4-27) ಹಾಗೂ ಸುರೇಶ್ ರೈನಾ ಅವರ ಸೊಗಸಾದ ಬ್ಯಾಟಿಂಗ್(ಔಟಾಗದೆ 58,42 ಎಸೆತ)ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವಿವಾರ ಇಲ್ಲಿ ನಡೆದ 23ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದೆ. ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ ಧೋನಿ ಬಳಗ ತಾನಾಡಿದ 8ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮತ್ತೊಂದೆಡೆ, ಕೋಲ್ಕತಾ ಸತತ ಮೂರನೇ ಸೋಲು ಕಂಡಿದೆ.

ಈಡನ್‌ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಚೆನ್ನೈನಾಯಕ ಧೋನಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಕೋಲ್ಕತಾ ತಂಡ ಆರಂಭಿಕ ಆಟಗಾರ ಕ್ರಿಸ್ ಲಿನ್ ಶತಕಾರ್ಧ(82, 51 ಎಸೆತ)ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 161 ರನ್ ಗಳಿಸಿತು.

 ಗೆಲ್ಲಲು ಸವಾಲಿನ ಮೊತ್ತ ಪಡೆದ ಚೆನ್ನೈ ಎಂದಿನಂತೆ ಒತ್ತಡವನ್ನು ಮೀರಿ ಬ್ಯಾಟ್ ಬೀಸಿ 19.4 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿ ಗೆಲುವಿನ ದಡ ಸೇರಿತು.

 3.1ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಶೇನ್ ವಾಟ್ಸನ್(6)ವಿಕೆಟನ್ನು ಕಳೆದುಕೊಂಡ ಚೆನ್ನೈ ಕಳಪೆ ಆರಂಭ ಪಡೆದಿತ್ತು. ಇನ್ನೋರ್ವ ಆರಂಭಿಕ ಎಫ್‌ಡು ಪ್ಲೆಸಿಸ್(24), ಅಂಬಟಿ ರಾಯುಡು(5)ಹಾಗೂ ಕೇದಾರ್ ಜಾಧವ್(20) ಬೇಗನೆ ವಿಕೆಟ್ ಒಪ್ಪಿಸಿದರು. ಆಗ 12ನೇ ಓವರ್‌ನಲ್ಲಿ 81 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಸಂಕಷ್ಟದಲ್ಲಿತ್ತು. ನಾಯಕ ಎಂ.ಎಸ್. ಧೋನಿ(16)ಜೊತೆ ಕೈಜೋಡಿಸಿದ ರೈನಾ 5ನೇ ವಿಕೆಟ್‌ಗೆ 40 ರನ್ ಸೇರಿಸಿ ತಂಡದ ಆತಂಕ ದೂರ ಮಾಡಿದರು. 13 ಎಸೆತಗಳಲ್ಲಿ 16 ರನ್ ಗಳಿಸಿದ್ದ ಧೋನಿಯವರನ್ನು ಸುನೀಲ್ ನರೇನ್ ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ಆಗ ತಂಡಕ್ಕೆ ಆಸರೆಯಾಗಿ ನಿಂತ ಸುರೇಶ್ ರೈನಾ(ಔಟಾಗದೆ 58, 42 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ(ಔಟಾಗದೆ 31, 17 ಎಸೆತ, 5 ಬೌಂಡರಿ)6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 41 ರನ್ ಕಲೆ ಹಾಕಿ ಇನ್ನೂ 2 ಎಸೆತ ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.

ಚೆನ್ನೈಗೆ 2 ಓವರ್‌ಗಳಲ್ಲಿ 24 ರನ್ ಅಗತ್ಯವಿತ್ತು. ಆಗ ಗುರ್ನೆ ಎಸೆದ 19ನೇ ಓವರ್‌ನಲ್ಲಿ ಸತತ 3 ಬೌಂಡರಿ ಸಹಿತ 15 ರನ್ ಗಳಿಸಿದ ಜಡೇಜ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.

ಆತಿಥೇಯ ಕೋಲ್ಕತಾದ ಪರ ಸ್ಪಿನ್ನರ್‌ಗಳಾದ ಸುನೀಲ್ ನರೈನ್(2-19) ಹಾಗೂ ಪಿಯೂಷ್ ಚಾವ್ಲಾ(2-32) ತಲಾ ಎರಡು ವಿಕೆಟ್ ಪಡೆದರು.

 ಕೋಲ್ಕತಾ 161/8: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ಲಿನ್ ಏಕಾಂಗಿ ಹೋರಾಟದ(82,51 ಎಸೆತ, 7 ಬೌಂಡರಿ, 6 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 161 ರನ್ ಕಲೆ ಹಾಕಿತು. ನಿತಿನ್ ರಾಣಾ(21), ದಿನೇಶ್ ಕಾರ್ತಿಕ್(18), ಶುಭಮನ್ ಗಿಲ್(15) ಹಾಗೂ ಆ್ಯಂಡ್ರೆ ರಸಲ್(10)ಎರಡಂಕೆಯ ಸ್ಕೋರ್ ಗಳಿಸಿದರು.

ಚೆನ್ನೈ ಬೌಲಿಂಗ್ ವಿಭಾಗದಲ್ಲಿ ಹಿರಿಯ ಸ್ಪಿನ್ನರ್ ಇಮ್ರಾನ್ ತಾಹಿರ್(4-27) ಯಶಸ್ವಿ ಬೌಲರ್ ಎನಿಸಿಕೊಂಡರು. ತಾಹಿರ್‌ಗೆ ಶಾರ್ದೂಲ್ ಠಾಕೂರ್(2-18) ಉತ್ತಮ ಸಾಥ್ ನೀಡಿದರು.

ಕೋಲ್ಕತಾದ ಪ್ರಮುಖ ನಾಲ್ವರು ದಾಂಡಿಗರಾದ ಕ್ರಿಸ್ ಲಿನ್, ನಿತಿನ್ ರಾಣಾ, ರಾಬಿನ್ ಉತ್ತಪ್ಪ ಹಾಗೂ ರಸೆಲ್‌ಗೆ ತಾಹಿರ್ ಪೆವಿಲಿಯನ್‌ಗೆ ಹಾದಿ ತೋರಿಸಿದರು. ಈ ಮೂಲ ಗರಿಷ್ಠ ವಿಕೆಟ್ ಪಡೆದವರು ಧರಿಸುವ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಕೋಲ್ಕತಾ: 20 ಓವರ್‌ಗಳಲ್ಲಿ 161/8

(ಕ್ರಿಸ್ ಲಿನ್ 82, ನಿತಿಶ್ ರಾಣಾ 21, ಇಮ್ರಾನ್ ತಾಹಿರ್ 4-27, ಶಾರ್ದೂಲ್ ಠಾಕೂರ್(2-18)

ಚೆನ್ನೈ: 19.4 ಓವರ್‌ಗಳಲ್ಲಿ 162/5

(ಸುರೇಶ್ ರೈನಾ ಔಟಾಗದೆ 58, ಜಡೇಜ ಔಟಾಗದೆ 31, ಪ್ಲೆಸಿಸ್ 24, ಜಾಧವ್ 20, ನರೈನ್ 2-19, ಚಾವ್ಲಾ 2-32)

ಪಂದ್ಯಶ್ರೇಷ್ಠ: ಇಮ್ರಾನ್ ತಾಹಿರ್.

               

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News