ಕಾಂಗ್ರೆಸ್ ವಿಜಯ ಪತಾಕೆ ಹಾರಿಸುವುದಷ್ಟೇ ಬಾಕಿ: ಯುವ ಕಾಂಗ್ರೆಸ್ ನಾಯಕ ಪ್ರವೀಣ್‌ ಚಂದ್ರ ಆಳ್ವ

Update: 2019-04-14 17:27 GMT
 ಪ್ರವೀಣ್‌ ಚಂದ್ರ ಆಳ್ವ

ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆಯುತ್ತಿದ್ದು, ಅದರಲ್ಲೂ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಪೈಪೋಟಿ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಾಜಿ ಕಾರ್ಪೊರೇಟರ್ ಹಾಗೂ ನಗರ ಯೋಜನಾ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವರೊಂದಿಗೆ ‘ವಾರ್ತಾಭಾರತಿ’ ಮಾತನಾಡಿಸಿದಾಗ....

ಬಿರುಸಿನ ಪ್ರಚಾರ

ಮನೆ ಮನೆ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸುತ್ತಿದ್ದೇವೆ. ಪಕ್ಷದ ಸಕ್ರಿಯ ಕಾರ್ಯಕರ್ತರು ಮಾತ್ರವಲ್ಲ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಯುವ ಜನರು ಕೂಡ ಈ ಬಾರಿ ಬದಲಾವಣೆಯನ್ನು ಬಯಸಿ ನಮ್ಮ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯ ವೈಫಲ್ಯವನ್ನು ಪಟ್ಟಿ ಮಾಡಿ ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲ, ದೇಶದಲ್ಲೂ ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವನ್ನು ಅಧಿಕಾರದಿಂದ ಹೊರಗಿಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ನಮ್ಮ ಪ್ರಚಾರ-ಮನವಿಗೆ ಉತ್ತಮ ಪ್ರತಿಕ್ರಿಯೆ-ಸ್ಪಂದನೆ ವ್ಯಕ್ತವಾಗುತ್ತಿದೆ. ಇದೇ ಮೊದಲ ಬಾರಿಗೆ ಯುವ ಮತದಾರರಲ್ಲಿ ಹುರುಪು ಕಾಣಿಸಿಕೊಂಡಿದೆ.

ಮೋದಿ ಬಗ್ಗೆ ಆತಂಕವಿಲ್ಲ

ಮೋದಿ ಅಲೆ ಎಂಬುದು ಬರೀ ಸುಳ್ಳು. ಸ್ವತಃ ನಳಿನ್ ಮತ್ತು ಬಿಜೆಪಿಗರಿಗೆ ‘ಸೋಲು ಖಂಡಿತಾ’ ಎಂಬ ಅರಿವಾಗಿದೆ. ಜಿಲ್ಲೆಯ ಹಿರಿಯ ಮತ್ತು ಕಿರಿಯ ಮತದಾರರು, ಜಾತಿ-ಮತಭೇದ ಮರೆತು ಮಿಥುನ್ ರೈ ಪರ ಇರುವುದನ್ನು ಮನಗಂಡ ನಳಿನ್ ಮತ್ತು ಬಿಜೆಪಿಗರು ‘ಮತ್ತೊಮ್ಮೆ ಮೋದಿ’ ಎಂಬ ಘೋಷಣೆ ಕೂಗಿ ಮೋಸ ಮಾಡಲು ಮುಂದಾಗಿದ್ದಾರೆ. ಆದರೆ ಜಿಲ್ಲೆಯ ಪ್ರಜ್ಞಾವಂತ ಮತದಾರರು ಮಿಥುನ್ ರೈ ಕೈ ಬಿಡಲಾರರು. ಮೋದಿಯ ಬಗ್ಗೆ ನಮಗೆ ಯಾವ ಆತಂಕವೂ ಇಲ್ಲ. ನಮ್ಮ ಮತ ಸುಭದ್ರವಾಗಿದೆ.

ಮಿಥುನ್ ಎಲ್ಲರ ಪ್ರೀತಿ-ವಿಶ್ವಾಸ ಗೆದ್ದ ಯುವ ನಾಯಕ

ಮಿಥುನ್ ರೈ ಕೇವಲ ಬಂಟ ಸಮಾಜದ ಯುವಕನಲ್ಲ. ಅವರು ಸಮಾಜದ ಎಲ್ಲಾ ಧರ್ಮ, ಜಾತಿ, ಜನಾಂಗದ ಜನರ ಪ್ರೀತಿ-ವಿಶ್ವಾಸ ಗೆದ್ದ ಯುವ ನಾಯಕ. ಅವರು ಯಾವತ್ತೂ ಜಾತಿ-ಧರ್ಮದ ಆಧಾರದ ಮೇಲೆ ಯಾವ ಕೆಲಸವನ್ನೂ ಮಾಡಿಲ್ಲ. ಏನಿದ್ದರೂ ಕೂಡ ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋಗು ವಂತಹ ಕೆಲಸವನ್ನು ಮಾತ್ರ ಮಾಡಿದ್ದಾರೆ. ಅವರನ್ನು ಸಮಾಜದ ಎಲ್ಲರೂ ಪ್ರೀತಿಸುವ ಕಾರಣ ಖಂಡಿತಾ ಅವರು ಸಂಸದರಾಗಿ ಆಯ್ಕೆಯಾಗಲಿದ್ದಾರೆ.

ಅಂಕಿಅಂಶ ಮುಖ್ಯವಲ್ಲ

ಇಲ್ಲಿ ಅಂಕಿ ಅಂಶಗಳು ಮುಖ್ಯವಲ್ಲ. ಕಳೆದ 28 ವರ್ಷಗಳಿಂದ ಈ ಕ್ಷೇತ್ರ ಕಾಂಗ್ರೆಸ್‌ನ ಕೈ ತಪ್ಪುತ್ತಾ ಬಂದಿದೆ. ಆದರೆ, ಈ ಬಾರಿ ಹಾಗಾಗಬಾರದು. ಬಿಜೆಪಿಯ ಸೋಲಿಗೆ ಇಲ್ಲಿಂದಲೇ ಮುನ್ನುಡಿ ಬರೆಯಬೇಕು ಎಂಬ ಅಭಿಲಾಶೆಯೊಂದಿಗೆ ಹೈಕಮಾಂಡ್ ಯುವ ನಾಯಕನಿಗೆ ಟಿಕೆಟ್ ನೀಡಿದೆ. ಮಿಥುನ್‌ ರನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮದಾಗಿದೆ. ಕಾಂಗ್ರೆಸ್‌ನ ಹಿರಿಯ ಮತ್ತು ಕಿರಿಯ ನಾಯಕರು, ಕಾರ್ಯಕರ್ತರು ಯಾವುದೇ ಅಪಸ್ವರ ಎತ್ತದೆ, ಅಸಮಾಧಾನ ವ್ಯಕ್ತಪಡಿಸದೆ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್, ಸಿಪಿಎಂ, ಸಿಪಿಐ ಸಹಿತ ಜಾತ್ಯತೀತ ಪಕ್ಷಗಳು, ಸಂಘಟನೆಗಳ ಕಾರ್ಯಕರ್ತರು ಕೂಡ ಶಕ್ತಿ ಮೀರಿ ಪ್ರಚಾರ ಮಾಡುತ್ತಿದ್ದಾರೆ. ನಾವೀಗಾಗಲೆ ಜನರ ಹೃದಯ ಗೆದ್ದಿದ್ದೇವೆ. ಚುನಾವಣೆ ನಡೆದು ಫಲಿತಾಂಶ ಘೋಷಣೆಯೊಂದಿಗೆ ವಿಜಯ ಪತಾಕೆ ಹಾರಿಸಲು ಮಾತ್ರ ಬಾಕಿ ಇದೆ.

ನಳಿನ್ ಅಸಮರ್ಥ ಎಂದು ಬಿಜೆಪಿಗರೇ ಹೇಳುತ್ತಿದ್ದಾರೆ

ನಳಿನ್ ಅಸಮರ್ಥ ಎಂದು ನಾವು ಹೇಳುವ ಮುನ್ನ ಬಿಜೆಪಿಯವರೇ ಹೇಳುತ್ತಿದ್ದಾರೆ. ಜನರ ಕಣ್ಣಿಗೆ ರಾಚುವಂತಹ ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನ ಮೇಲ್ಸೇತುವೆಯ ಕಾಮಗಾರಿಯನ್ನು ಪೂರೈಸಲಾಗದ ನಳಿನ್‌ರನ್ನು ನಾವು ಮತ್ತೊಮ್ಮೆ ಆರಿಸಿ ಕಳುಹಿಸಿಕೊಡಬೇಕಾ ? ವಿಜಯ ಬ್ಯಾಂಕ್ ವಿಲೀನ ತಡೆಯಲಾಗದ ಮತ್ತು ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಡುವಾಗ ಮೌನವಾಗಿದ್ದ ನಳಿನ್ ಮತ್ತೆ ನಮಗೆ ಬೇಕಾ ? ನೀವೇ ಹೇಳಿ....

ನಳಿನ್‌ಗಿಂತ ಮಿಥುನ್ ಮೇಲು

ಮಿಥುನ್ ರೈ ಯುವ ನಾಯಕ, ಸಮರ್ಥ ಸಂಘಟಕ, ಹೋರಾಟಗಾರ. ಸಮಾಜ ಸೇವಕ. ಯುವ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಚೈತನ್ಯ ನೀಡಿದ್ದೂ, ಜಿಲ್ಲೆಯ ಸಾಂಸ್ಕೃತಿಕ ಕಲೆಗೊಂದು ಮೆರುಗು ಬರುವಂತೆ ಮಾಡಿದ್ದೂ ಅವರೇ. ಅವರ ಹಿಂದೆ ಸಾವಿರಾರು ಯುವಕರ ಅದರಲ್ಲೂ ವಿದ್ಯಾರ್ಥಿ ಸಮೂಹವಿದೆ. ಜಾತಿ-ಧರ್ಮ ನೋಡದೆ ಅದೆಷ್ಟೋ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ವಿಶೇಷ ಚೇತನ ಸಹಿತ ಅನಾಥ ಮಕ್ಕಳಿಗೆ ನೆರವು ನೀಡಿದ್ದಾರೆ. ಆ ಬಗ್ಗೆ ಅವರೆಂದೂ ಪ್ರಚಾರ ಮಾಡಿದವರಲ್ಲ. ಸಂಸತ್ತಿನಲ್ಲಿ ಭಾಷೆಯ ಸಮಸ್ಯೆ ಎದುರಿಸುವ ನಳಿನ್‌ಗಿಂತ ಸುಸಂಸ್ಕೃತ ಕುಟುಂಬದ ಮಿಥುನ್ ರೈ ನೂರುಪಾಲು ಆಗಬಹುದು ಎಂದು ಮತದಾರರು ನಿರ್ಧರಿಸಿದ್ದಾರೆ.

ಕೇಸರಿ ಶಾಲಿನ ವಸ್ತುಸ್ಥಿತಿ ಮನವರಿಕೆ

‘ಕೇಸರಿ ಶಾಲು’ ಅನ್ನು ನಾವ್ಯಾರೂ ಸಂಘ ಪರಿವಾರಕ್ಕೆ ಗುತ್ತಿಗೆ ನೀಡಿಲ್ಲ. ಅದು ಹಿಂದುತ್ವದ ಸಂಕೇತವೂ ಅಲ್ಲ. ಭಾರತದ ಧ್ವಜದ ತ್ರಿವರ್ಣಗಳಲ್ಲಿ ಅದೊಂದಾಗಿದೆ. ಅದನ್ನು ಸಮಾಜದಲ್ಲಿ ಅಶಾಂತಿ ಮೂಡಿಸುವವರು ಹೈಜಾಕ್ ಮಾಡಿದ್ದಾರಷ್ಟೆ. ನಾವು ಆ ಶಾಲ್‌ನ ಬಗ್ಗೆ ವಸ್ತು ಸ್ಥಿತಿಯನ್ನು ನಾಗರಿಕರಿಗೆ ಮನವರಿಕೆ ಮಾಡುತ್ತಿದ್ದೇವೆ. ಇನ್ನು ಮಿಥುನ್ ಕೇವಲ ಕೇಸರಿ ಮಾತ್ರವಲ್ಲ, ಹಸಿರು, ಬಿಳಿ, ಹಳದಿ ಶಾಲನ್ನೂ ಕೂಡ ಧರಿಸಿದ್ದಾರೆ. ವಿಪರ್ಯಾಸವೆಂದರೆ ಅದು ಯಾರ ಕಣ್ಣನ್ನೂ ಕುಕ್ಕಿಲ್ಲ. ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವವರಿಗೆ ಮಾತ್ರ ಕೇಸರಿ ಶಾಲು ಮುಖ್ಯವಾಗಿ ಕಾಣುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News