ಮತ ನೀಡಿ ಎಂದು ಬೆದರಿಕೆ ಹಾಕಿರುವುದು ಖಂಡನೀಯ

Update: 2019-04-14 18:13 GMT

ಮಾನ್ಯರೇ,

ಉತ್ತರ ಪ್ರದೇಶದ ಬಿಜೆಪಿ ಅಭ್ಯರ್ಥಿ ಮೇನಕಾ ಗಾಂಧಿ ಇತ್ತೀಚೆಗೆ ಪ್ರಚಾರ ಸಭೆಯೊಂದರಲ್ಲಿ ತಮ್ಮ ಭಾಷಣದಲ್ಲಿ ಮುಸ್ಲಿಮರನ್ನುದ್ದೇಶಿಸಿ ‘ನನಗೆ ಮತ ನೀಡಿ, ಇಲ್ಲದಿದ್ದರೆ ನಿಮ್ಮ ಮನವಿಗಳಿಗೆ ಸ್ಪಂದಿಸಲು ನಾನು ಮನಸ್ಸು ಮಾಡದಿರಬಹುದು’ ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯವಾದುದು. ಚುನಾವಣೆ ಕಣದಲ್ಲಿರುವ ಅಭ್ಯರ್ಥಿ ಮತದಾರರಿಗೆ ತಮ್ಮ ಪರ ಬಲವಂತವಾಗಿ ಮತದಾನ ಮಾಡುವಂತೆ ಬೆದರಿಕೆ ಒಡ್ಡುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧ. ಇಂತಹ ಮನಸ್ಥಿತಿ ಹೊಂದಿರುವ ಅಭ್ಯರ್ಥಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಹಾಗೂ ಕಳಂಕವಾಗಿದ್ದಾರೆ. ಮೇನಕಾ ಗಾಂಧಿಯವರ ಪಕ್ಷಕ್ಕೆ ಯಾಕೆ ಮುಸ್ಲಿಮರು ಮತ ಹಾಕಬೇಕು ಎಂಬುದನ್ನೊಮ್ಮೆ ಮೊದಲು ಅವರು ಸ್ಪಷ್ಟಪಡಿಸಬೇಕು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಸ್ಲಿಂ ಸಮುದಾಯದ ಮೇಲೆ ಸದಾ ಗೂಬೆ ಕೂರಿಸುವವರು ಇಂದು ಮುಸ್ಲಿಮರ ಮತಕ್ಕಾಗಿ ಹಾತೊರೆಯುತ್ತಿರುವುದು ವಿಪರ್ಯಾಸವೇ ಸರಿ. ಚುನಾವಣೆಯ ಈ ಸಂದರ್ಭದಲ್ಲಿ ಅಭ್ಯರ್ಥಿಗಳು ತಾವು ಮಾಡಿದ ಕಲ್ಯಾಣ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚಿಸಬೇಕೇ ಹೊರತು ಮತದಾರರಿಗೆ ಬೆದರಿಕೆ ಹಾಕುವುದರ ಮೂಲಕ ಅಲ್ಲ. ತನ್ನ ಗೆಲುವಿನಲ್ಲಿ ಮುಸ್ಲಿಮರ ಪಾಲು ಇರದಿದ್ದರೆ ತನಗೆ ಬೇಸರವಾಗುತ್ತದೆ ಎಂದು ಹೇಳುವ ಮೇನಕಾ ಗಾಂಧಿ, ಈ ಮಾತನ್ನು ಆಡುವುದಕ್ಕಿಂತ ಮುಂಚೆ ಇವರು ಪ್ರತಿನಿಧಿಸುವ ಪಕ್ಷ ಮುಸ್ಲಿಮರ ಏಳಿಗೆಗಾಗಿ ಏನೆಲ್ಲಾ ಅಭಿವದ್ಧಿ ಕಾರ್ಯಗಳನ್ನು ಕೈಗೊಂಡಿದೆ, ಯಾವ ಪ್ರಾಶಸ್ತ್ಯ ನೀಡಿದೆ ಎಂಬುದನ್ನೊಮ್ಮೆ ಅವಲೋಕನ ನಡೆಸಲಿ. ಇಲ್ಲಿ ಬಿಜೆಪಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಒತ್ತಟ್ಟಿಗಿರಲಿ, ಈ ಸಮುದಾಯದ ಬದುಕನ್ನು ನರಕವನ್ನಾಗಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಗೋ ರಕ್ಷಣೆಯ ಹೆಸರಿನಲ್ಲಿ ಗುಂಪು ಹಲ್ಲೆ ನಡೆಸುವುದರ ಮೂಲಕ ಅದೆಷ್ಟೋ ಅಮಾಯಕರನ್ನು ಬಲಿ ತೆಗೆದುಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ನಡುವೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಧರ್ಮ, ಭಾಷೆ ಆಚಾರ ವಿಚಾರಗಳನ್ನು ಸಮಾನವಾಗಿ ಕಾಣಬೇಕು. ಮಾತ್ರವಲ್ಲ ವಿವಿಧತೆಯನ್ನು ಗೌರವಿಸಿ ಅದಕ್ಕೆ ಚ್ಯುತಿ ಬರದ ಹಾಗೆ ಕಾಪಾಡಬೇಕೆಂದು ನಮ್ಮ ಸಂವಿಧಾನ ಹೇಳುತ್ತದೆ. ಆದರೆ ಮೇನಕಾ ಗಾಂಧಿಯವರ ಪಕ್ಷ ಈ ವ್ಯವಸ್ಥೆಯನ್ನು ನಾಶಮಾಡಲು ಹೊರಟಂತೆ ಕಾಣುತ್ತದೆ. ಇವರಿಂದ ಇಡೀ ದೇಶಕ್ಕೆ ಗಂಡಾಂತರ ಎದುರಾಗಿದ್ದು ಜನಸಾಮಾನ್ಯರು ಇದರ ವಿರುದ್ಧ ಧ್ವನಿ ಎತ್ತಬೇಕು. ಮಂದಿರ ಮತ್ತು ಮಸೀದಿಯ ವಿಷಯವನ್ನು ಜಪಿಸುತ್ತ ಚುನಾವಣೆ ನಡೆಸುವ ಬಿಜೆಪಿಯಿಂದ ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಮೂರ್ಖತನವಾಗಿದೆ. ಆದ್ದರಿಂದ ಮೇನಕಾ ಗಾಂಧಿ ಯಾವುದೇ ವಿಷಯವನ್ನು ಪ್ರಸ್ತಾಪಿಸುವಾಗ ಯೋಚಿಸಿ ಮಾತನಾಡಲಿ. 

Writer - ರಿಯಾಝ್ ಅಹ್ಮದ್, ರೋಣ

contributor

Editor - ರಿಯಾಝ್ ಅಹ್ಮದ್, ರೋಣ

contributor

Similar News