ಅಸಮಾನತೆ ಇರುವ ಧರ್ಮದಲ್ಲಿ ಮಾನವೀಯತೆಗೆ ನೆಲೆಯಿಲ್ಲ: ಬುದ್ಧ ಬಿಕ್ಕುಣಿ ಸುನಿತಾ

Update: 2019-04-14 18:17 GMT

ಬೆಂಗಳೂರು, ಎ.14: ಅಸಮಾನತೆ ಇರುವ ಧರ್ಮದಲ್ಲಿ ಮಾನವೀಯತೆಗೆ ನೆಲೆ ಇರುವುದಿಲ್ಲ ಎಂದು ಮಹಾರಾಷ್ಟ (ನಾಗಪುರ)ದ ಬುದ್ಧ ಬಿಕ್ಕುಣಿ ಸುನಿತಾ ಅಭಿಪ್ರಾಯಪಟ್ಟರು.

ರವಿವಾರ ಸದಾಶಿವನಗರದ ನಾಗಸೇನಾ ಬುದ್ಧವಿಹಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ 128ನೆ ಜಯಂತಿ ಪ್ರಯುಕ್ತ ವಿಶ್ವ ಬುದ್ಧಧಮ್ಮ ಪರಿಷತ್ ಆಯೋಜಿಸಿದ್ದ, ಬುದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ನೂರಾರು ಜನರಿಗೆ ದೀಕ್ಷೆ ನೀಡಿದ ಬಳಿಕ ಅವರು ಮಾತನಾಡಿದರು.

ಯಾವ ಧರ್ಮದಲ್ಲಿ ಮಾನವೀಯ ವೌಲ್ಯಗಳಿರುತ್ತದೋ ಆ ಧರ್ಮದಲ್ಲಿ ಸಮಾನತೆ ಇರುತ್ತದೆ ಹಾಗೂ ಎಲ್ಲರನ್ನೂ ಸಮಭಾವದಿಂದ ಕಾಣಲಾಗುತ್ತದೆ ಎಂದು ಪ್ರತಿಪಾದಿಸಿದರು.

ಬುದ್ಧ ದೇವರಲ್ಲ, ನಮ್ಮ ನಿಮ್ಮನ್ನೆಲ್ಲರ ಶಿಕ್ಷಕ. ಜಗತ್ತಿಗೆ ಬೇಕಾಗಿರುವುದು ಸನ್ಮಾರ್ಗದ ದಾರಿ ತೋರಿಸುವ ನಾಯಕ. ಅಲ್ಲದೆ, ಸರ್ವ ಧರ್ಮಗನ್ನೂ ಸಮಭಾವದಿಂದ ಕಂಡಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸಮಭಾವವೂ ಎಲ್ಲರನ್ನೂ ಒಳಗೊಂಡ ಮೌಲ್ಯವಾಗಿದ್ದು, ಹಿಂದೂ ಧರ್ಮ ಜಾತಿಗಳಿಂದ ತುಳುಕುತ್ತಿರುವುದಿಂದ ಅಲ್ಲಿ ಅಸಮಾನತೆ ತಾಡವವಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾನು (ಅಂಬೇಡ್ಕರ್) ಬೌದ್ಧ ಧಮ್ಮವನ್ನು ಸೇರುವುದಿಂದ ಈ ದೇಶದ ಸಂಸ್ಕೃತಿಗೆ ಹಾಗೂ ಚಾರಿತ್ರೆಗೆ ಧಕ್ಕೆಬಾರದಂತೆ ಎಚ್ಚರ ವಹಿಸಿದ್ದೇನೆ. ಬುದ್ಧ ಧಮ್ಮವೂ ದೇಶದ ಅವಿಭಾಜ್ಯ ಅಂಗವಾಗಿದೆ. ನಾನು ನನ್ನ ಮನೆಗೆ ಹೋಗುತ್ತಿದ್ದೇನೆ. ಮಾನವೀಯ ಧರ್ಮಕ್ಕೆ ಹೋಗುತ್ತಿದ್ದೇನೆ. ಇದು ಪ್ರಬುದ್ಧ ಭಾರತದ ಕನಸು ಎಂದು ಅಂಬೇಡ್ಕರ್ ಬುದ್ಧ ಧಮ್ಮ ಅನುಕರಣೆ ಮಾಡುವಾಗ ಹೇಳಿದರು ಎಂದು ನೆನಪಿಸಿದರು.

ಬುದ್ಧನು ಮನುಷ್ಯ ತನ್ನ ಜೀವನದಲ್ಲಿ ಆರಂಭಿಕವಾಗಿ ಪಾಲಿಸಬೇಕಾದ ಐದು ನಿಯಮಗಳನ್ನು ಹೇಳಿದ್ದಾನೆ. ಅವುಗಳನ್ನೇ ನಾವು ಪಂಚಶೀಲಗಳು ಎಂದು ಕರೆಯುತ್ತೇವೆ. ಅವುಗಳಿಗೆ ಶುದ್ಧತಾ ಮಾರ್ಗವೆಂದೂ ಕರೆಯಲಾಗುತ್ತದೆ. ಬುದ್ಧನ ಪ್ರತಿಯೊಬ್ಬ ಅನುಯಾಯಿಯೂ ಇದನ್ನು ಪಾಲಿಸಲೇಬೇಕು. ಇವುಗಳನ್ನು ಮನುಷ್ಯ ತನ್ನ ಅಳತೆಗೋಲುಗಳಾಗಿ ಬಳಸಿಕೊಳ್ಳಬೇಕೆಂದು ಅವರು ದೀಕ್ಷಾ ನೀಡಿದರು.

ಪಂಚಶೀಲಗಳ ಅಳತೆಗೋಲಿಲ್ಲದ ವ್ಯಕ್ತಿ ತಾನು ಯಾವಾಗಲೂ ಒಳ್ಳೆಯವನೇ ಎಂಬ ಭ್ರಮೆಯಲ್ಲಿ ಮುಳುಗಿರುತ್ತಾನೆ. ಆದರೆ ಅಳತೆಗೋಲಿರುವ ವ್ಯಕ್ತಿ ಮೇಲೇಳಲು ಪ್ರಯತ್ನಿಸುತ್ತಾನೆ. ತಾನು ಹೀನ ಸ್ಥಿತಿಯಲ್ಲಿರುವ ಅರಿವನ್ನು ಈ ಪಂಚಶೀಲಗಳು ಅವನಿಗೆ ತಿಳಿಸುತ್ತಿರುತ್ತವೆ. ಪಂಚಶೀಲಗಳು, ಒಬ್ಬ ವ್ಯಕ್ತಿ ತನ್ನನ್ನು ತಾನು ಅರಿಯಲು ಅವಶ್ಯವಾಗಿವೆ ಎಂದು ವಿವರಿಸಿದರು.

ಅಂಧಾನುಕರಣೆಗಳಲ್ಲಿ ಬಂಧಿಯಾಗಿದ್ದ ಜನರನ್ನು ಅವರು ಪ್ರಾಯೋಗಿಕ ತತ್ವಗಳ ಬೆಳಕಿನಲ್ಲಿ ಮುಕ್ತಗೊಳಿಸಿದರು. ನಿರ್ಭಯವಾಗಿ ಬದುಕುವ ಧೈರ್ಯದ ಧಮ್ಮ ಅವರಲ್ಲಿ ಮೂಡಿಸಿತು. ಅತ್ಯಂತ ಸರಳ ಮತ್ತು ಪಾರದರ್ಶಕವಾಗಿದ್ದ ಈ ತತ್ವಗಳು ಎಲ್ಲ ಸಮುದಾಯಗಳ ಮನಸೊರೆಗೊಂಡಿವೆ ಎಂದು ತಿಳಿಸಿದರು.

ಬೌದ್ಧ ಧಮ್ಮ ದೀಕ್ಷಾ ಸಮಾರಂಭದಲ್ಲಿ ಸಾವಿರಾರು ಜನರಿಗೆ ಬುದ್ಧ ಧಮ್ಮದ ಪಂಚಶೀಲ ತತ್ವ ಹಾಗೂ ಅಂಬೇಡ್ಕರ್ ರಚಿಸಿದ 22 ಸತ್ಯ ವಾಕ್ಯಗಳನ್ನು ಮಹಾರಾಷ್ಟ್ರ (ನಾಗಪುರ)ದ ಬಿಕ್ಕುಣಿಗಳಾದ ಬುದ್ಧಮ್ಮ ಹಾಗೂ ಸುನಿತಾರವರು ಬೋಧಿಸಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಮಾನವೀಯ ಧರ್ಮದ ಹರಿಕಾರರಾಗಿ ಮನುಷ್ಯ-ಮನುಷ್ಯನಿಗೆ ಗೌರವ ನೀಡಬೇಕೆಂದು ಪ್ರದಿಪಾದಿಸಿದರು’

- ಸುನಿತಾ, ನಾಗಪುರದ ಬುದ್ಧ ಬಿಕ್ಕುಣಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News