ಜಪಾನ್ ನ ಮೊಮೊಟಾಗೆ ಸಿಂಗಲ್ಸ್ ಗರಿ

Update: 2019-04-15 01:42 GMT

ಸಿಂಗಾಪುರ, ಎ.14: ಇಂಡೋನೇಶ್ಯದ ಅಂಥೋನಿ ಸಿನಿಸುಕಾ ಗಿಂಟಿಕ್ ಅವರ ಆಕ್ರಮಣಕಾರಿ ಹೊಡೆತಗಳನ್ನು ಮೀರಿನಿಂತ ಜಪಾನ್ ಆಟಗಾರ ಕೆಂಟೊ ಮೊಮೊಟಾ ರವಿವಾರ ನಡೆದ ಸಿಂಗಾಪುರ ಓಪನ್ ಫೈನಲ್ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. 10-21, 21-19, 21-13 ಗೇಮ್‌ಗಳಿಂದ ಎದುರಾಳಿಯನ್ನು ಬಗ್ಗುಬಡಿದ ಮೊಮೊಟಾ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

 ಗೇಮ್‌ನ ಪ್ರಥಮಾರ್ಧದಲ್ಲಿ ಕೋರ್ಟ್‌ನ ಎರಡೂ ಮೂಲೆಗಳಿಗೂ ಮೊಮೊಟಾರನ್ನು ಓಡಾಡಿಸಿದರು ಇಂಡೋನೇಶ್ಯದ ಅಂಥೋನಿ. ಮೊದಲು ಗೇಮನ್ನು ಕಳೆದುಕೊಂಡ ಮೊಮೊಟಾ ಎರಡನೇ ಗೇಮ್‌ನಲ್ಲಿ ಆರಂಭದಲ್ಲಿ 11-16ರ ಹಿನ್ನಡೆಯಲ್ಲಿದ್ದರು. ಆದರೆ ತಿರುಗೇಟು ನೀಡಿ ಗೇಮನ್ನು 21-19ರಿಂದ ಗೆದ್ದುಕೊಂಡು ನಿರ್ಣಾಯಕ ಹಾಗೂ ಮೂರನೇ ಗೇಮ್‌ಗೆ ಪಂದ್ಯವನ್ನು ಕೊಂಡೊಯ್ದರು. ಮೂರನೇ ಗೇಮ್‌ನಲ್ಲೂ ಇದೇ ರೀತಿಯ ಆಟ ಪುನರಾವರ್ತನೆಯಾಯಿತು. ಆರಂಭದಲ್ಲಿ ಹಿನ್ನಡೆ ಕಂಡ ಮೊಮೊಟಾ ಬಳಿಕ ಚೇತರಿಸಿಕೊಂಡು ಮುನ್ನುಗ್ಗಿದರು.

ಸುಧಾರಿತ ಹಾಗೂ ತಾಂತ್ರಿಕ ಕೌಶಲಗಳಿಂದ ಗಮನ ಸೆಳೆದ ಎಡಗೈ ಆಟಗಾರ ಮೊಮೊಟಾ 14 ಅಂಕಗಳ ಪೈಕಿ 13 ಅಂಕಗಳನ್ನು ಗಳಿಸಿ ಅಂಥೋನಿಗೆ ಆಘಾತ ನೀಡಿದರು. ಪುರುಷ ಡಬಲ್ಸ್‌ನಲ್ಲಿ ಜಪಾನ್‌ನ ತಾಕೆಶಿ ಕಮುರಾ- ಕಿಯ್‌ಗೊ ಸೊನೊಡಾ ಜೋಡಿಯು ಇಂಡೋನೇಶ್ಯದ ಮುಹಮ್ಮದ್ ಅಹ್ಸಾನ್- ಹೆಂಡ್ರಾ ಸೆತಿಯವಾನ್ ಜೋಡಿಯನ್ನು 21-13, 19-21, 21-7 ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.

ಯಿಂಗ್‌ಗೆ ಒಲಿದ ಮಹಿಳಾ ಸಿಂಗಲ್ಸ್ ಪ್ರಶಸ್ತಿ

ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ನೊರೊಮಿ ಒಕುಹರಾ ಅವರನ್ನು 21-19, 21-15ರಿಂದ ತೈವಾನ್‌ನ ತೈ ಝು ಯಿಂಗ್ ಮಣಿಸಿದರು. 40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಲೇಶ್ಯ ಓಪನ್ ವಿಜೇತ ಯಿಂಗ್, ವೇಗ, ಕೌಶಲ ಹಾಗೂ ಸೊಗಸಾದ ಆಟದ ಮೂಲಕ ಗಮನಸೆಳೆದರು.

ಈ ಫಲಿತಾಂಶದೊಂದಿಗೆ ಯಿಂಗ್ ಅವರು ಒಕುಹರಾ ಅವರೊಂದಿಗಿನ ಹೆಡ್-ಟು-ಹೆಡ್ ದಾಖಲೆಯನ್ನು 5-4ಕ್ಕೆ ಹೆಚ್ಚಿಸಿಕೊಂಡರು.

 ಮಿಶ್ರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ಡೆಚ್‌ಪೊಲ್ ಪುವಾರ್‌ನೊಕ್ರೊ -ಸ್ಯಾಪ್ಸರೀ ಜೋಡಿಯು ಮಲೇಶ್ಯದ ತಾನ್ ಕಿಯಾನ್ ಮೆಂಗ್ ಹಾಗೂ ಲೈ ಪೇ ಜಿಂಗ್ ಜೋಡಿಯನ್ನು 21-14, 21-16 ನೇರ ಗೇಮ್‌ಗಳಿಂದ ಸೋಲಿಸಿತು.

ಮಹಿಳಾ ಡಬಲ್ಸ್‌ನಲ್ಲಿ ಜಪಾನ್‌ನ ಮಾಯು ಮಟ್ಸುಮೊಟೊ-ವಕಾನಾ ನಗಹರಾ ಜೋಡಿಯು ದಕ್ಷಿಣ ಕೊರಿಯದ ಕಿಮ್ ಹೇ-ಜಿಯೊಂಗ್-ಕಾಂಗ್ ಹೀ ಯೊಂಗ್ ಜೋಡಿಯನ್ನು 21-17 22-20 ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News