ಮೊದಲ ಹಂತದ ಚುನಾವಣೆ: ಈ ಮತಗಟ್ಟೆಯಲ್ಲಿ ಒಂದೂ ಮತ ಚಲಾವಣೆಯಾಗಲಿಲ್ಲ!

Update: 2019-04-15 03:41 GMT

ಹೊಸದಿಲ್ಲಿ, ಎ.15: ಭಾರತದ ದಕ್ಷಿಣ ತುದಿಯ ಈ ಮತಗಟ್ಟೆಯಲ್ಲಿ ಇತ್ತೀಚೆಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಒಂದು ಮತವೂ ಚಲಾವಣೆಯಾಗದ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ. ಅಂಡಮಾನ್ ಮತ್ತು ನಿಕೋಬಾರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರೇಟ್ ನಿಕೋಬಾರ್ ದ್ವೀಪದ ಶೋಂಪೆನ್ ಹಟ್‌ನಲ್ಲಿರುವ ಮತಗಟ್ಟೆಯೇ ಈ ವಿಶೇಷ ಮತಗಟ್ಟೆ.

ದಟ್ಟ ಕಾಡಿನ ನಡುವೆ ಇರುವ ಇಲ್ಲಿ 31 ಕುಟುಂಬ ವಾಸವಿದ್ದು, ಇವರೆಲ್ಲರೂ ಶಿಲಾಯುಗದ ಕಟ್ಟಕಡೆಯ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಎಪ್ರಿಲ್ 11ರಂದು ಇಲ್ಲಿ ಮತದಾನ ನಡೆದಿತ್ತು. ಭಾರತ ಉಪಖಂಡದ ದಕ್ಷಿಣದ ತುದಿಯಿಂದ 20 ಕಿಲೋಮೀಟರ್ ದೂರದಲ್ಲಿರುವ ಈ ಮತಗಟ್ಟೆಯಲ್ಲಿ, 2014ರ ಚುನಾವಣೆಯಲ್ಲಿ ಶೋಂಪೆನ್ ಬುಡಕಟ್ಟಿನ ಇಬ್ಬರು ಮತ ಚಲಾಯಿಸಿದ್ದರು. ಗ್ರೇಟ್ ನಿಕೋಬಾರ್ ದ್ವೀಪದ ಈ ದೇಶಿ ಬುಡಕಟ್ಟು ಜನಾಂಗದವರು ಮತದಾನ ಮಾಡಿದ ಮೊಟ್ಟಮೊದಲ ದಾಖಲೆ ಅದಾಗಿತ್ತು!

"ಶೋಂಪೆನ್ ಹಟ್‌ನಲ್ಲಿ 66 ಹಾಗೂ 22 ಮತಗಳನ್ನು ಹೊಂದಿದ ಎರಡು ಮತಗಟ್ಟೆಗಳಿವೆ. ಇವರಿಗೆ ಮತದಾನದ ಸೌಲಭ್ಯ ಕಲ್ಪಿಸುವ ಸಲುವಾಗಿ ಅತ್ಯಂತ ಕಡಿದಾದ ಪ್ರದೇಶದಲ್ಲಿ ನಮ್ಮ ಚುನಾವಣಾ ಸಿಬ್ಬಂದಿ ಹಾಜರಿದ್ದರು. ಆದರೆ ಈ ವರ್ಷ ಯಾವ ಮತವೂ ಚಲಾವಣೆಯಾಗಿಲ್ಲ" ಎಂದು ಅಂಡಮಾನ್ ಮತ್ತು ನಿಕೋಬಾರ್ ಕ್ಷೇತ್ರದ ಮುಖ್ಯ ಚುನಾವಣಾ ಅಧಿಕಾರಿ ಕೆ.ಆರ್.ಮೀನಾ ಪ್ರಕಟಿಸಿದ್ದಾರೆ.

ಇಲ್ಲಿ ವಾಸಿಸುವ ಜನ ದಟ್ಟ ಕಾಡಿನಿಂದ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಶೋಂಪೆನ್ ಹಟ್‌ನಿಂದ ಪಡಿತರ ಸಾಮಗ್ರಿ ಒಯ್ಯಲು ಬರುತ್ತಾರೆ. ಸ್ಥಳೀಯರು ಬಟ್ಟೆಯಲ್ಲಿ ಗಂಟು ಹಾಕಿ ಮತದಾನಕ್ಕೆ ಎಷ್ಟು ದಿನ ಬಾಕಿ ಇದೆ ಎಂಬ ಸಂಕೇತ ರವಾನಿಸುತ್ತಾರೆ. ಎಪ್ರಿಲ್ 11ರಂದು ಇಲ್ಲಿ ಮತದಾನ ನಡೆಯುತ್ತಿದೆ ಎಂದು ತಿಳಿಸಲು ಸಂಕೇತ ಭಾಷೆ ಮತ್ತು ಸ್ಥಳೀಯ ಉಪಭಾಷೆಯನ್ನು ಬಳಸಿದ್ದಾರೆ. ಆದರೆ ಯಾರೂ ಮತದಾನಕ್ಕೆ ಬಂದಿಲ್ಲ. ಬಹುಶಃ ಸ್ಥಳೀಯರ ಸಂವಹನ ಪರಿಣಾಮಕಾರಿಯಾಗಿರಲಿಲ್ಲ; ಅಥವಾ ಅವರು ಮತ ಹಾಕಲು ಬಯಸಲಿಲ್ಲ" ಎಂದು ಮೀನಾ ಹೇಳಿದ್ದಾರೆ.

ಮತದಾನದ ಬಗ್ಗೆ ಮಾಹಿತಿ ನೀಡಲು ದಟ್ಟ ಅರಣ್ಯದ ಒಳಕ್ಕೆ ಅಧಿಕಾರಿಗಳು ಏಕೆ ಹೋಗಿಲ್ಲ ಎಂದು ಕೇಳಿದಾಗ, "ಸುಪ್ರೀಂ ಕೋರ್ಟ್ ಆದೇಶದಂತೆ ಆ ನಿರ್ದಿಷ್ಟ ಬುಡಕಟ್ಟು ಜನಾಂಗದವರನ್ನು ಹೊರತುಪಡಿಸಿ, ಬುಡಕಟ್ಟು ಮೀಸಲು ಅರಣ್ಯದ ಸುತ್ತಲಿನ 5 ಕಿಲೋಮೀಟರ್ ಪ್ರದೇಶದೊಳಕ್ಕೆ ಯಾರೂ ಹೋಗುವಂತಿಲ್ಲ" ಎಂದು ಅವರು ಸ್ಪಷ್ಟನೆ ನೀಡಿದರು. ಬುಡಕಟ್ಟು ಜನಾಂಗದವರು ಹೊರ ಜಗತ್ತನ್ನು ಸಂಪರ್ಕಿಸಿದಾಗ ಮಾತ್ರ ಅವರೊಂದಿಗೆ ಸಂವಾದ ನಡೆಸಲು ಅವಕಾಶವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News