ಬಿಜೆಪಿ ಅಲ್ಲ; ಇದು ಅತ್ಯಧಿಕ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಪಕ್ಷ!

Update: 2019-04-15 04:12 GMT

ಹೊಸದಿಲ್ಲಿ, ಎ.15: ದೇಶದಲ್ಲಿ ಅತಿ ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಪಕ್ಷ, ಅತಿಹೆಚ್ಚು ದೇಣಿಗೆ ಸಂಗ್ರಹಿಸಿದ ಬಿಜೆಪಿ ಎಂದು ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ತಪ್ಪು. ಬಹುಜನ ಸಮಾಜ ಪಕ್ಷ ಗರಿಷ್ಠ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ ಪಕ್ಷೆನ್ನುವುದು ಅಧಿಕೃತ ದಾಖಲೆಗಳಿಂದ ತಿಳಿದುಬರುತ್ತದೆ. ಫೆಬ್ರವರಿ 25ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವೆಚ್ಚ ವರದಿಯ ಪ್ರಕಾರ, ಬಹುಜನ ಸಮಾಜ ಪಕ್ಷದ ಎಂಟು ಬ್ಯಾಂಕ್ ಖಾತೆಗಳಲ್ಲಿ 699 ಕೋಟಿ ರೂಪಾಯಿ ಠೇವಣಿ ಇದೆ!

2014ರ ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಬಿಎಸ್ಪಿ, 95.54 ಲಕ್ಷ ರೂಪಾಯಿ ನಗದು ಹೊಂದಿದೆ. ಸಮಾಜವಾದಿ ಪಕ್ಷ ಎರಡನೇ ಸ್ಥಾನದಲ್ಲಿದ್ದು, 471 ಕೋಟಿ ರೂಪಾಯಿಗಳನ್ನು ಬ್ಯಾಂಕ್ ಖಾತೆಗಳಲ್ಲಿ ಹೊಂದಿದೆ. ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ಚುನಾವಣೆ ಬಳಿಕ ಪಕ್ಷದ ನಗದು ಪ್ರಮಾಣ 11 ಕೋಟಿ ರೂಪಾಯಿಗೆ ಕುಸಿದಿದೆ.

196 ಕೋಟಿ ರೂಪಾಯಿ ಠೇವಣಿ ಹೊಂದಿರುವ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನದಲ್ಲಿದ್ದರೆ, ತೆಲುಗು ದೇಶಂ (107), ಬಿಜೆಪಿ (82), ಸಿಪಿಎಂ (3) ಹಾಗೂ ಆಮ್ ಆದ್ಮಿ ಪಾರ್ಟಿ (3) ನಂತರದ ಸ್ಥಾನಗಳಲ್ಲಿವೆ. ಕಾಂಗ್ರೆಸ್ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ 2018ರ ನವೆಂಬರ್‌ನಲ್ಲಿ ವೆಚ್ಚ ವರದಿ ಸಲ್ಲಿಸಿದ್ದು, ನಾಲ್ಕು ರಾಜ್ಯಗಳ ಚುನಾವಣೆ ಬಳಿಕ ಪರಿಷ್ಕರಿಸಿಲ್ಲ.

ಬಿಜೆಪಿ ಚುನಾವಣಾ ಬಾಂಡ್ ಸೇರಿದಂತೆ ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿದ್ದರೂ, ಬಿಜೆಪಿ ತೋರಿಸಿರುವ ಲೆಕ್ಕಾಚಾರದ ಪ್ರಕಾರ ಪಕ್ಷದ ಠೇವಣಿ ಕೇವಲ 82 ಕೋಟಿ ರೂಪಾಯಿ. 2017-18ರಲ್ಲಿ ಸಂಗ್ರಹಿಸಿದ 1027 ಕೋಟಿ ರೂಪಾಯಿಗಳ ಪೈಕಿ 758 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಬಿಜೆಪಿ ಹೇಳಿಕೊಂಡಿದೆ. ಇದು ಯಾವುದೇ ಪಕ್ಷ ಮಾಡಿದ ಗರಿಷ್ಠ ವೆಚ್ಚವಾಗಿದೆ.

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ 25 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದ ಬಿಎಸ್ಪಿಯ ಒಟ್ಟು ಬ್ಯಾಂಕ್ ಬ್ಯಾಲೆನ್ಸ್ ಚುನಾವಣೆ ಬಳಿಕ 665 ಕೋಟಿ ರೂಪಾಯಿಯಿಂದ 670 ಕೋಟಿ ರೂಪಾಯಿಗೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News