ಮತೀಯ ಹೇಳಿಕೆ ನೀಡಿದ ಆದಿತ್ಯನಾಥ್ ಗೆ 3 ದಿನಗಳ ಕಾಲ ಪ್ರಚಾರ ನಿಷೇಧ

Update: 2019-04-15 11:31 GMT

ಹೊಸದಿಲ್ಲಿ, ಎ.15: ತಮ್ಮ ಮತೀಯ ಹೇಳಿಕೆಗಳಿಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಇಂದಿನಿಂದ ಮೂರು ದಿನಗಳ ಕಾಲ ಪ್ರಚಾರ ಕಾರ್ಯ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಬಹುಜನ ಸಮಾಜ ಪಕ್ಷ ನಾಯಕಿ ಮಾಯಾವತಿ ದಿಯೋಬಂದ್ ಎಂಬಲ್ಲಿ ನೀಡಿರುವ ಪ್ರಚೋದನಾತ್ಮಕ ಹೇಳಿಕೆಗೆ ಅವರಿಗೆ 48 ಗಂಟೆಗಳ ಕಾಲ ಪ್ರಚಾರದಲ್ಲಿ ತೊಡಗದಂತೆ ಆಯೋಗ ನಿರ್ಬಂಧ ಹೇರಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸುಪ್ರೀಂ ಕೋರ್ಟಿನಿಂದ ತರಾಟೆಗೊಳಗಾದ ಬೆನ್ನಿಗೇ ಆಯೋಗದ ಈ ಕ್ರಮ ಕೈಗೊಂಡಿದೆ.

ಸಂವಿಧಾನದ 324ನೇ ವಿಧಿಯನ್ವಯ ತನಗಿರುವ ವಿಶೇಷಾಧಿಕಾರ ಬಳಸಿ ಆಯೋಗ ಮಾಯಾವತಿ ಮತ್ತು ಆದಿತ್ಯನಾಥ್ ಅವರಿಗೆ ಪ್ರಚಾರ ಕಾರ್ಯಕ್ಕೆ ನಿಷೇಧ ಹೇರಿದೆ. ಕಾಂಗ್ರೆಸ್ ಪಕ್ಷ ಮತ್ತು ತಮ್ಮ ಮೈತ್ರಿಯ ನಡುವೆ ಮತಗಳನ್ನು ವಿಭಜಿಸದಂತೆ ಮಾಯಾವತಿ ಕೆಲ ದಿನಗಳ ಹಿಂದೆ ದಿಯೋಬಂದ್ ಎಂಬಲ್ಲಿ ನಡೆದ ಸಭೆಯಲ್ಲಿ ಹೇಳಿದ್ದರು.

ಅತ್ತ ಆದಿತ್ಯನಾಥ್  ತಮ್ಮ ಭಾಷಣವೊಂದರಲ್ಲಿ ``ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಬಿಎಸ್‍ಪಿಗೆ ಅಲಿ ಮೇಲೆ ನಂಬಿಕೆಯಿದ್ದರೆ ನಮಗೆ ಬಜರಂಗ ಬಲಿ ಮೇಲೆ ನಂಬಿಕೆಯಿದೆ'' ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News