ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಸೇರಲಿ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

Update: 2019-04-15 15:56 GMT

ಬೆಂಗಳೂರು, ಎ.15: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ, ಎನ್‌ಡಿಎ ಮೈತ್ರಿಕೂಟ ಸೇರ್ಪಡೆ ಆಗಬೇಕು. ಈ ನಿಟ್ಟಿನಲ್ಲಿ, ಲೋಕಸಭಾ ಚುನಾವಣೆ ಬಳಿಕ ನೇರವಾಗಿ ಅವರೊಂದಿಗೆ ಚರ್ಚೆ ನಡೆಸಲಾಗುವುದೆಂದು ಆರ್‌ಪಿಐ(ಎ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿಳಿಸಿದರು.

ಸೋಮವಾರ ನಗರದ ಅರಮನೆ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿರುವ ಕುಮಾರಸ್ವಾಮಿ ಅವರು ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯದ ಅಭಿವೃದ್ಧಿಯೂ ಕುಂಠಿತವಾಗಿದೆ. ಹೀಗಾಗಿ, ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.

ರಾಹುಲ್ ಗಾಂಧಿ ಅವರು, ಪ್ರಧಾನ ಮಂತ್ರಿ ಆಗುವ ಕನಸು ಕಾಣಬಾರದು. ಏಕೆಂದರೆ, ನರೇಂದ್ರ ಮೋದಿ ಇರುವರೆಗೂ ಅವರು ಪ್ರಧಾನಿ ಆಗಲು ಸಾಧ್ಯವಾಗಿಲ್ಲ. ಮಹಾಘಟ್ ಬಂದನ್ ಎನ್ನುವುದು ಬರೀ ಬಾಯಿ ಮಾತು. ಈ ಗುಂಪಿನಲ್ಲಿರುವ ಎಲ್ಲರೂ, ಪ್ರಧಾನ ಮಂತ್ರಿ ಆಗುವ ಕನಸು ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.

ಪ್ರತ್ಯೇಕ ಸ್ಪರ್ಧೆ: ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿಯೂ ತಮ್ಮ ಪಕ್ಷಕ್ಕೆ ಸ್ಥಾನ ನೀಡದ ಕಾರಣ, ಪ್ರತ್ಯೇಕ ಸ್ಪರ್ಧೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿಯು ಆರ್‌ಪಿಐ(ಎ) ಪಕ್ಷಕ್ಕೆ ಎರಡು ಸ್ಥಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದೆವು. ಆದರೆ, ಅವರು ನಿರಾಕರಿಸಿದರು. ಹೀಗಾಗಿ, ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸ್ಫರ್ದೆಗೆ ಸಿದ್ಧತೆ ನಡೆಸಿದ್ದು, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಾಗುವುದು ಎಂದರು.

ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ತಮ್ಮ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದು, ಉಳಿದ 24 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಹೇಳಲಾಗಿದೆ ಎಂದ ಅವರು, ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಆಡಳಿತ ಬರಲಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್‌ಪಿಐ ರಾಜ್ಯಾಧ್ಯಕ್ಷ ಎ.ವೆಂಕಟಸ್ವಾಮಿ, ಬಿಜೆಪಿ ವಕ್ತಾರ ಆನಂದ್, ವೈ.ಎಸ್.ದೇವುರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮಾಹಿತಿ ಇಲ್ಲದೆ ತಡವರಿಸಿದ ಸಚಿವ

ಕೇಂದ್ರದ ಮೋದಿ ಸರಕಾರ, ಬಜೆಟ್‌ನಲ್ಲಿ ದಲಿತರಿಗೆ ಶೇಕಡ ಎಷ್ಟು ಹಣ ಮೀಸಲಿಟ್ಟಿತ್ತು. ಅದೇ ರೀತಿ, ತಳ ಸಮುದಾಯದ ಕಲ್ಯಾಣಕ್ಕೆ ಯಾವ ರೀತಿ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಲು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ತಡವರಿಸಿದರು.

ಬಳಿಕ ಅವರು, ಮೋದಿ ಸರಕಾರ ಹತ್ತು ಹಲವು ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ಪ್ರಮುಖವಾಗಿ ದಲಿತರಿಗೆ ಅನುಕೂಲವಾಗಿದೆ. ಹೀಗಾಗಿ, ಎನ್‌ಡಿಎ ಮೈತ್ರಿ ಕೂಟ ಬೆಂಬಲಿಸಬೇಕು. ಈ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಐದು ವರ್ಷಗಳ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 86 ಸಾವಿರ ಕೋಟಿ ರೂ. ಅನುದಾನ ನೀಡಿದ್ದು, ಅವರಿಗೆ ನನ್ನ ಅಭಿನಂದನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News