×
Ad

ತೇಜಸ್ವಿ ಸೂರ್ಯ ಆಯ್ಕೆ ಬಗ್ಗೆ ನನ್ನ ಪ್ರಶ್ನೆಗಳಿಗೆ ನಾಯಕರಿಂದ ಇನ್ನೂ ಉತ್ತರ ಸಿಕ್ಕಿಲ್ಲ: ತೇಜಸ್ವಿನಿ ಅನಂತಕುಮಾರ್

Update: 2019-04-15 20:22 IST

ಬೆಂಗಳೂರು, ಎ.15: ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ನನ್ನ ಪ್ರಶ್ನೆಗಳಿಗೆ ಪಕ್ಷದಿಂದ ಉತ್ತರ ಬಯಸಿದ್ದು ಸತ್ಯ. ಆದರೆ, ಈ ಬಗ್ಗೆ ಪಕ್ಷದ ನಾಯಕರಿಂದ ಯಾವುದೇ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಲ್ಲೇಶ್ವರಂ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಯುದ್ದಕಾಲ. ಹೀಗಾಗಿ ನಾಯಕರು ಮುಂದಿನ ದಿನಗಳಲ್ಲಿ ಉತ್ತರ ನೀಡಬಹುದು. ತಾನು ಕಾರಣ ಕೇಳಿಲ್ಲ, ಅವರೂ ಹೇಳಿಲ್ಲ ಎಂದರು.

ತಮ್ಮ ಮೇಲಿನ ಅಭಿಮಾನಕ್ಕೆ ಹಾಗೂ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕೆಲ ಬೆಂಬಲಿಗರು ‘ನೋಟಾ’ಗೆ ಮತ ಚಲಾಯಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿರುವುದು ಪಕ್ಷ ವಿರೋಧಿ. ಅಥವಾ ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.

ಬಿ.ಎಲ್.ಸಂತೋಷ್ ಅವರು ತನ್ನ ಬಗ್ಗೆ ಏನು ಹೇಳಿದ್ದಾರೆಂಬುದು ತನಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ಡಿಎನ್‌ಎ ಬಗ್ಗೆ ಅವರನ್ನೇ ಕೇಳಬೇಕು. ಮಾಧ್ಯಮಗಳ ವರದಿಯನ್ನು ನೋಡಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಮೇಲೆ ಬಂದಿರುವ ಮಹಿಳಾ ದೌರ್ಜನ್ಯ ನಡೆಸಿರುವ ಬಗ್ಗೆ, 'ಚುನಾವಣೆ ವೇಳೆ ಆರೋಪ ಸಹಜ. ಇದರ ಸತ್ಯಾಸತ್ಯತೆ ತನಿಖೆಯಿಂದ ಗೊತ್ತಾಗಬೇಕಿದೆ' ಎಂದು ತೇಜಸ್ವಿನಿ ಅನಂತಕುಮಾರ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News