ಬಿಜೆಪಿ ನಾಯಕರನ್ನು ದೂರವಿಡುವಂತೆ ಕೃಷ್ಣಭೈರೇಗೌಡ ಮನವಿ

Update: 2019-04-15 16:39 GMT

ಬೆಂಗಳೂರು, ಎ.15: ಐದು ವರ್ಷ ಬಡವರ ಪರ ಯಾವುದೇ ಕೆಲಸ ಮಾಡದೆ ಬರೀ ಸುಳ್ಳು ಹೇಳಿಕೊಂಡು ಕಾಲ ಕಳೆದು ಈಗ ಮತ್ತೆ ಮತ ಕೇಳಲು ಬಂದಿರುವ ಬಿಜೆಪಿ ನಾಯಕರನ್ನು ದೂರವಿಡಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಮನವಿ ಮಾಡಿದರು.

ಸೋಮವಾರ ಯಶವಂತಪುರ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಸಾರ್ವಜನಿಕ ಸಭೆಗಳಲ್ಲಿ ಕೇಂದ್ರದ ಬಿಜೆಪಿ ಸರಕಾರದ ಹುಸಿ ಭರವಸೆಗಳನ್ನು ಮತ್ತು ವೈಫಲ್ಯಗಳನ್ನು ಟೀಕಿಸಿದರು.

ಕೇಂದ್ರ ಸರಕಾರ ದೊಡ್ಡ ಉದ್ಯಮಿಗಳ ಪರ ಕೆಲಸ ಮಾಡಿಕೊಂಡು ಬಂದಿತೇ ವಿನಃ ಬಡವರ ಪರವಾಗಿ ಯಾವ ಯೋಜನೆಯೂ ಜಾರಿ ಮಾಡಲಿಲ್ಲ. ಬದಲಿಗೆ ನಿರಂತರವಾಗಿ ಸುಳ್ಳು ಹೇಳಿಕೊಂಡೇ ಬಂದರು. ಬೆಲೆ ನಿಯಂತ್ರಣ, ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫಲವಾದರು. ಜಿಎಸ್‌ಟಿ ಬರೆ ಎಳೆದು ಬಡವರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದರು. ಹೀಗಿದ್ದೂ ಮತ್ತೊಮ್ಮೆ ಮೋದಿ ಎಂದು ಮುಖವಾಡ ಹಿಡಿದು ಓಟು ಕೇಳಲು ಬಂದಿದ್ದಾರೆ ಎಂದು ಅವರು ದೂರಿದರು.

ಬಿಜೆಪಿ ನಾಯಕರು ನಿಮ್ಮ ಮನೆಗೆ ಮತ ಕೇಳಲು ಬಂದಾಗ ಅವರು ಹಿಂದೆ ನೀಡಿದ್ದ ಭರವಸೆಯಂತೆ 15 ಲಕ್ಷ ರೂ.ಎಲ್ಲಿ ಎಂದು ಕೇಳಿ. ಅವರ ಎದುರಿಗೆ ಒಂದು ಚೀಲ ಹಿಡಿದು, ಮೊದಲು ಇದರಲ್ಲಿ 15 ಲಕ್ಷ ರೂ.ಹಾಕಿ, ಆಮೇಲೆ ಮತ ಕೇಳಲು ಸೂಚಿಸಿ ಎಂದು ಕೃಷ್ಣಭೈರೇಗೌಡ ಮನವಿ ಮಾಡಿದರು.

ಈ ಬಾರಿ ಮತದಾರರು ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸದೇ ಇದ್ದರೆ ಮಂದೆಯೂ ಇಂತಹ ಸುಳ್ಳುಗಳನ್ನು ಹೇಳಿಕೊಂಡು ಕಾಲ ಕಳೆದು ದೇಶದ ಬಡವರಿಗೆ ಇನ್ನಷ್ಟು ಅನ್ಯಾಯ ಮಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ ಮೈತ್ರಿ ಸರಕಾರವನ್ನು ಕೆಡವಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಸರಕಾರ ಉರುಳಿ ಹೋಗುತ್ತದೆ ಎಂದು ಪುಕಾರು ಹಬ್ಬಿಸಿ ಅದನ್ನೇ ಸತ್ಯ ಮಾಡಲು ಕುತಂತ್ರ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು. ರಾಜ್ಯದ ಮೈತ್ರಿ ಸರಕಾರ ಸುಭದ್ರವಾಗಿ ಇರಬೇಕಾದರೆ ಮತ್ತು ನಮ್ಮ ಸರಕಾರ ಬಡವರ ಪರ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಬೇಕಿದ್ದರೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ ಎಂದು ಕೃಷ್ಣಭೈರೇಗೌಡ ಮನವಿ ಮಾಡಿದರು.

ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಹಾಗೂ ಜೆಡಿಎಸ್ ಮುಖಂಡ ಜವರೇಗೌಡ ಮಾತನಾಡಿ, ಸ್ಥಳೀಯವಾಗಿ ಇಬ್ಬರೂ ನಾಯಕರ ನಡುವೆ ಪರಸ್ಪರ ಸ್ಪರ್ಧೆ ಇರಬಹುದು. ಆದರೆ, ನಮ್ಮ ಎರಡೂ ಪಕ್ಷಗಳ ಹಿರಿಯ ನಾಯಕರು ಒಟ್ಟಾಗಿ ಕೃಷ್ಣಭೈರೇಗೌಡ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ ಎಂದರು.

ನಮ್ಮ ನಾಯಕರ ಸೂಚನೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಗೆಲ್ಲಿಸುವುದು ನಮ್ಮ ಕರ್ತವ್ಯ. ಎಲ್ಲಕ್ಕಿಂತ ಮಿಗಿಲಾಗಿ ಓರ್ವ ಸಜ್ಜನ ರಾಜಕಾರಣಿ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಒಂದುಗೂಡಿ ದುಡಿಯಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News