ಕಾಂಗ್ರೆಸ್ ನಾಯಕ ಜಿ.ಎ.ಬಾವ ಮನೆಗೆ ಐಟಿ ದಾಳಿ?

Update: 2019-04-15 16:49 GMT

ಬೆಂಗಳೂರು, ಎ.15: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ನಿವೃತ್ತ ಡಿಸಿಪಿ ಜಿ.ಎ.ಬಾವ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಆಪ್ತರು ಎನ್ನಲಾದ ಪ್ರಮುಖರ ನಿವಾಸಗಳ ಮೇಲೆ ಸೋಮವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಸೋಮವಾರ ಮಧ್ಯಾಹ್ನ ಇಲ್ಲಿನ ಆರ್.ಟಿ ನಗರದಲ್ಲಿರುವ ಜಿ.ಎ ಬಾವ, ಫ್ರೇಜರ್ ಟೌನ್‌ನಲ್ಲಿರುವ ಸೆಯ್ಯದ್ ಮುಜಾಹಿದ್ ಮತ್ತು ಟ್ಯಾನರಿ ರಸ್ತೆಯಲ್ಲಿರುವ ರೋಹನ್ ಅವರ ನಿವಾಸದ ಮೇಲೆ ದಾಳಿ 18ಕ್ಕೂ ಅಧಿಕ ಮಂದಿ ಐಟಿ ಅಧಿಕಾರಿಗಳು ದಾಳಿ ನಡೆಸಿದರು ಎನ್ನಲಾಗಿದೆ. 

ಮಧ್ಯಾಹ್ನ 2:30ರ ವೇಳೆ ಐಟಿ ದಾಳಿ ನಡೆಸಿದ ವಿಚಾರ ತಿಳಿಯುತ್ತಿದ್ದಂತೆ ಖಾಸಗಿ ಕಾರ್ಯಕ್ರಮವೊಂದರಲ್ಲಿದ್ದ ಬಾವ ಅವರು ಮನೆಗೆ ಬಂದು, ಐಟಿ ಅಧಿಕಾರಿಗಳಿಗೆ ತಮ್ಮ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು, ಸಚಿವ ಝಮೀರ್ ಅಹ್ಮದ್ ಆಪ್ತರಾಗಿರುವ ಸೆಯ್ಯದ್ ಮುಜಾಯಿದ್‌ ಅವರ ಪ್ರೆಜರ್‌ಟೌನ್ ನಿವಾಸಕ್ಕೆ ಸಂಜೆ 6 ಗಂಟೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕೆಲ ಆಸ್ತಿ ಪತ್ರ ಜಪ್ತಿ ಮಾಡಿದ್ದು, ಇನ್ನಷ್ಟು ದಾಖಲೆಗಳಿಗೆ ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಝಮೀರ್ ಅಹ್ಮದ್‌ ಅವರ ಮತ್ತೋರ್ವ ಆಪ್ತ ಎನ್ನಲಾದ ಜುವೆಲ್ಲರ್ಸ್ ಅಂಗಡಿ ಮಾಲಕರಾಗಿರುವ ರೋಹನ್ ಅವರ ಟ್ಯಾನರಿ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ತನಿಖೆ ಮುಂದುವರೆದಿದ್ದು, ಚಿನ್ನಾಭರಣ ವ್ಯವಹಾರಕ್ಕೆ ಸಂಬಂಧಿಸಿದ ಕೆಲ ರಶೀದಿ ಮತ್ತು ಇತರ ಲೆಕ್ಕಪತ್ರಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News