ಅಂಬೇಡ್ಕರ್‌ನ್ನು ಜಾತಿಯ ಸಂಕುಚಿತತೆಯಿಂದ ಬಿಡುಗಡೆಗೊಳಿಸಬೇಕಿದೆ: ಡಾ.ಕಿರಣ್ ಗಾಜನೂರು

Update: 2019-04-15 17:52 GMT

ಬೆಂಗಳೂರು, ಎ.15: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಜಾತಿ, ಧರ್ಮ ಹಾಗೂ ರಾಜಕೀಯ ಸಂಕುಚಿತತೆಗಳಿಂದ ಬಿಡುಗಡೆಗೊಳಿಸಲು, ಅವರ ಬರವಣಿಗೆಗಳನ್ನು ಗಂಭೀರವಾಗಿ ಓದುವ ಮೂಲಕ ಸ್ವವಿಮರ್ಶೆಗೆ ಒಡ್ಡಿಕೊಳ್ಳಬೇಕಾಗದ ಅಗತ್ಯವಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ರಾಜ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕಿರಣ್ ಎಂ.ಗಾಜನೂರು ಅಭಿಪ್ರಾಯಿಸಿದರು.

ಸೋಮವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವು ಡಾ.ಬಿ.ಆರ್.ಅಂಬೇಡ್ಕರ್ 128ನೆ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂಗ್ಲೆಂಡ್‌ನಲ್ಲಿ ಮಹಿಳಾ ವಿಮೋಚನೆಗಾಗಿ ಚಿಂತನೆಗಳನ್ನು ರೂಪಿಸಲು ಡಾ.ಬಿ.ಆರ್.ಅಂಬೇಡ್ಕರ್‌ರವರ ಬರಹಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗೂ ವಿದೇಶಗಳಲ್ಲಿ ಅಂಬೇಡ್ಕರ್‌ರವರ ವ್ಯಕ್ತಿತ್ವವನ್ನು ಜ್ಞಾನದ ಸಂಕೇತವಾಗಿ ನೋಡಲಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಜಾತಿ, ಧರ್ಮದ ಸಂಕುಚಿತದಲ್ಲೇ ಬಂಧಿಸಲಾಗಿದೆ ಎಂದು ಅವರು ವಿಷಾದಿಸಿದರು.

ಡಾ.ಬಿ.ಆರ್.ಅಂಬೇಡ್ಕರ್‌ರವರ ಕೃತಿಗಳನ್ನು, ಲೇಖನಗಳನ್ನು ಓದದೆಯೇ ಪೂರ್ವಾಗ್ರಹ ಪೀಡಿತರಾಗಿಯೆ ನೋಡುವವರ ಸಂಖ್ಯೆ ಹೆಚ್ಚಿದೆ. ಕೆಲವು ಮೂಲಭೂತ ಚಿಂತಕರು ಅಂಬೇಡ್ಕರ್‌ರವರ ಕುರಿತು ವಾಟ್ಸಾಪ್ ಹಾಗೂ ಫೇಸ್‌ಬುಕ್‌ನಲ್ಲಿ ಹರಡುವ ಸುಳ್ಳು ಸುದ್ದಿಗಳನ್ನೇ ಓದಿ ತಪ್ಪು, ತಪ್ಪಾಗಿ ಅಭಿಪ್ರಾಯಗಳನ್ನು ಮೂಡಿಸಿಕೊಳ್ಳಲಾಗುತ್ತಿದೆ. ಇಂತಹ ಧೋರಣೆಯಿಂದ ಹೊರಬಂದಾಗ ಮಾತ್ರ ಸಮಾಜಕ್ಕಾಗಿ ದುಡಿದವರ ಕುರಿತು ಸತ್ಯಾಂಶವನ್ನು ತಿಳಿಯಲು ಸಾಧ್ಯವೆಂದು ಅವರು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಬದುಕಿನಲ್ಲಿ ವ್ಯಕ್ತಿಗತವಾಗಿ ಯಾರನ್ನೂ ವಿರೋಧಿಸಿದವರಲ್ಲ. ದೇಶದಲ್ಲಿರುವ ಮೌಢ್ಯ, ಮಾನವೀಯ ಆಚರಣೆಗಳ ವಿರುದ್ಧ ಮಾತ್ರ ಅಸಹನೀಯವಿತ್ತು. ಅವರು ತಮ್ಮ ಬದುಕಿನಲ್ಲಿ ಸುಮಾರು 24ಸಾವಿರ ಪುಟಗಳಷ್ಟು ಸಾಹಿತ್ಯವನ್ನು ರಚಿಸಿದ್ದಾರೆ. ಅದರಲ್ಲಿ ಒಂದು ವಾಕ್ಯವನ್ನು ಸಹ ಪೂರ್ವಾಗ್ರಹ ಪೀಡಿತರಾಗಿ ಬರೆದಿರುವುದನ್ನು ನೋಡಲು ಸಾಧ್ಯವಾಗುವುದಿಲ್ಲವೆಂದು ಅವರು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್‌ರವರ ಸಂಶೋಧನಾ ಮಾರ್ಗಗಳು ಮಾದರಿಯಾಗಬಲ್ಲವು. ಅವರು ಯಾವುದೆ ವಿಚಾರಗಳನ್ನು ದಾಖಲಿಸುವುದಕ್ಕೆ ಮೊದಲು ಗಂಭೀರವಾದ ಅಧ್ಯಯನದಲ್ಲಿ ತೊಡಗುತ್ತಿದ್ದರು. ಹೀಗಾಗಿ ಸಂಸ್ಕೃತವನ್ನು ಚೆನ್ನಾಗಿ ಕಲಿತು ವೇದ, ಉಪನಿಷತ್ತು, ಮನುಸ್ಮತಿ ಸೇರಿದಂತೆ ವೈದಿಕ ಧರ್ಮ ಶಾಸ್ತ್ರಗಳನ್ನು ಗಂಭೀರವಾಗಿ ಸಂಶೋಧಿಸಿ ಹಲವು ಕೃತಿಗಳನ್ನು ಬರೆದಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಸಂತೋಷ ಸು.ಹಾನಗಲ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News