ಸುದ್ದಿ ಪ್ರಕಾಶಕರ ಸರಕಾರಿ ಪ್ರಾಯೋಜಕತ್ವ ಪ್ರದರ್ಶಿಸಲಿದೆ ಯುಟ್ಯೂಬ್ ‘ಮಾಹಿತಿ ಫಲಕ’

Update: 2019-04-15 18:37 GMT

ಹೊಸದಿಲ್ಲಿ, ಎ. 15: ಸುದ್ದಿ ಸಂಬಂಧಿತ ವೀಡಿಯೊಗಳಲ್ಲಿ ತಪ್ಪು ಮಾಹಿತಿ ತೋರಿಸುವ ಯೂಟ್ಯೂಬ್‌ನ ‘ಮಾಹಿತಿ ಫಲಕಗಳು’ ಇನ್ನು ಮುಂದೆ ಸುದ್ದಿಯ ಪ್ರಕಾಶಕರಿಗೆ ಸರಕಾರ ಪ್ರಾಯೋಜಿತವೇ ಎಂಬುದನ್ನು ಬಹಿರಂಗಪಡಿಸಲಿದೆ.

ಯುಟ್ಯೂಬ್‌ನಲ್ಲಿ ನೋಡಲು ಆಯ್ಕೆ ಮಾಡುವ ಸುದ್ದಿಯ ಮೂಲವನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಹೆಚ್ಚುವರಿ ಮಾಹಿತಿ ನೀಡಿ ಬಳಕೆದಾರರನ್ನು ಸಜ್ಜುಗೊಳಿಸುವುದು ನಮ್ಮ ಉದ್ದೇಶ. ತನ್ನ ಚಾನೆಲ್‌ನಲ್ಲಿರುವ ಎಲ್ಲ ವೀಡಿಯೊಗಳ ವಾಚ್‌ಪೇಜ್‌ನ ಮೇಲೆ ಈ ಮಾಹಿತಿ ಫಲಕ ಪ್ರದರ್ಶನಗೊಳ್ಳಲಿದೆ ಎಂದು ಯು ಟ್ಯೂಬ್ ನಿರ್ದೇಶಕ (ಸುದ್ದಿ ಪಾಲುದಾರಿಕೆಯ ಮುಖ್ಯಸ್ಥ) ಟಿಮ್ ಕಾಟ್ಜ್ ತನ್ನ ಬ್ಲಾಗ್ ಸ್ಪಾಟ್‌ನಲ್ಲಿ ಹೇಳಿದ್ದಾರೆ.

ಈ ಹೆಚ್ಚುವರಿ ಮಾಹಿತಿ ಫಲಕಗಳು ಇಂಗ್ಲಿಶ್ ಹಾಗೂ ಹಿಂದಿಯಲ್ಲಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಚಾನೆಲ್ ಸರಕಾರಿ ಪ್ರಾಯೋಜಿತ ಸುದ್ದಿ ಪ್ರಕಾಶಕರದ್ದಾಗಿದ್ದರೆ, ಅವರು ‘ಪೂರ್ಣ ಅಥವಾ ಭಾಗಶಃ ಪ್ರಾಯೋಜಿತರೇ’ ಅಥವಾ ‘ಸಾರ್ವಜನಿಕ ಪ್ರಸಾರ ಸೇವೆ’ಯೇ ಎಂಬುದನ್ನು ಮಾಹಿತಿ ಫಲಕದಲ್ಲಿ ಸೂಚಿಸಲಾಗುವುದು. ಜೊತೆಗೆ ಪ್ರಕಾಶಕರ ವಿಕಿಪೀಡಿಯಾ ಪುಟದ ಕೊಂಡಿಯನ್ನು ಪ್ರದರ್ಶಿಸಲಾಗುವುದು ಎಂದು ಕಟ್ಜ್ ಹೇಳಿದ್ದಾರೆ.

ನಕಲಿ ಸುದ್ದಿಗಳು ಹರಡುವುದನ್ನು ತಡೆಯುವ ಒಂದು ಭಾಗವಾಗಿ ತನ್ನ ಜಾಲ ತಾಣದಲ್ಲಿನ ಸುದ್ದಿ ಸಂಬಂಧಿತ ವೀಡಿಯೋಗಳ ಸರಿಯಾದ ಒಳನೋಟ ನೀಡುವ ಹಾಗೂ ತಪ್ಪು ಮಾಹಿತಿ ಪ್ರದರ್ಶಿಸುವ ‘ಮಾಹಿತಿ ಫಲಕ’ಗಳನ್ನು ಪ್ರದರ್ಶಿಸಲು ಆರಂಭಿಸಲಾಗುವುದು ಎಂದು ಮಾರ್ಚ್‌ನಲ್ಲಿ ಯುಟ್ಯೂಬ್ ಮಾರ್ಚ್‌ನಲ್ಲಿ ಘೋಷಿಸಿತ್ತು. ಗೂಗಲ್ ಮಾಲಕತ್ವದ ವೀಡಿಯೊ ಜಾಲ ತಾಣ ಈಗಾಗಲೇ ‘ಬ್ರೇಕಿಂಗ್ ನ್ಯೂಸ್’ ಹಾಗೂ ‘ಟಾಪ್ ನ್ಯೂಸ್’ ಮುಂತಾದ ಸೌಲಭ್ಯ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News