ಪಾಂಡ್ಯ ಬ್ಯಾಟಿಂಗ್ ಅಬ್ಬರಕ್ಕೆ ಆರ್‌ಸಿಬಿ ತತ್ತರ

Update: 2019-04-15 18:55 GMT

ಮುಂಬೈ, ಎ.16: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 31ನೇ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್‌ಗೆ 5 ವಿಕೆಟ್‌ಗಳಿಂದ ಮಣಿದಿದೆ.

ಆರ್‌ಸಿಬಿ ನೀಡಿದ 172 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

ಮುಂಬೈ ಪರ ಕ್ವಿಂಟನ್ ಡಿಕಾಕ್ (40, 26 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ರೋಹಿತ್ ಶರ್ಮಾ (28, 19 ಎಸೆತ, 2 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್‌ಗೆ 70 ರನ್ ಸೇರಿಸಿದರು. ಇವರಿಬ್ಬರೂ ಮೊಯಿನ್ ಎಸೆದ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಔಟ್ ಆಗಿ ಪೆವಿಲಿಯನ್‌ಗೆ ಮರಳಿದಾಗ, ಜೊತೆಯಾದ ಸೂರ್ಯಕುಮಾರ್ ಯಾದವ್ (29, 23 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಇಶಾನ್ ಕಿಶನ್ (21, 9 ಎಸೆತ, 3 ಸಿಕ್ಸರ್) ಉತ್ತಮ ಆಟವಾಡಿದರು. ಕಿಶನ್ ಅವರು ಚಹಾಲ್ ಎಸೆತದಲ್ಲಿ ಪಾರ್ಥಿವ್‌ಗೆ ಕ್ಯಾಚ್ ನೀಡಿದರು. ಸೂರ್ಯಕುಮಾರ್ ಅವರು ಚಹಾಲ್‌ಗೆ ಬಲಿಯಾದರು

ಆ ಬಳಿಕ ಸಹೋದರರಾದ ಕೃಣಾಲ್ ಪಾಂಡ್ಯ (11) ಹಾಗೂ ಹಾರ್ದಿಕ್ ಪಾಂಡ್ಯ ತಂಡವನ್ನು ಗೆಲುವಿನ ದಡ ಸೇರಿಸುವ ಯತ್ನ ಮಾಡಿದರು, ಕೃಣಾಲ್ ಅವರು ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್(37, 16 ಎಸೆತ, 5 ಬೌಂಡರಿ, 2 ಸಿಕ್ಸರ್) ಮುಂಬೈ ಗೆಲುವು ಖಚಿತಪಡಿಸಿದರು.

ಆರ್‌ಸಿಬಿ ಪರ ಮೊಯಿನ್ ಅಲಿ (18ಕ್ಕೆ 2) ಹಾಗೂ ಚಹಾಲ್ (27ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಪಾರ್ಥಿವ್ (28, 20 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ವಿರಾಟ್ ಕೊಹ್ಲಿ (8, 9 ಎಸೆತ, 1 ಬೌಂಡರಿ) ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 12 ರನ್ ಸೇರಿಸಿದರು. ಈ ವೇಳೆ ಕೊಹ್ಲಿ ಅವರು ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಮೊದಲ ವಿಕೆಟ್ ಆಗಿ ಪೆವಿಲಿಯನ್ ಸೇರಿಕೊಂಡರು.

ಪಾರ್ಥಿವ್ ಜೊತೆಗೂಡಿದ ಎಬಿ ಡಿವಿಲಿಯರ್ಸ್ (75, 51 ಎಸೆತ, 6 ಬೌಂಡರಿ, 4 ಸಿಕ್ಸರ್) ಎರಡನೇ ವಿಕೆಟ್‌ಗೆ 37 ರನ್ ಕಲೆಹಾಕಿದಾಗ ಬೆಹ್ರೆನ್‌ಡಾರ್ಫ್ ಮೋಡಿ ಮಾಡಿದರು. ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಪಾರ್ಥಿವ್‌ರನ್ನು ಡಿಕಾಕ್‌ಗೆ ಕ್ಯಾಚ್ ನೀಡುವಂತೆ ಪ್ರೇರೇಪಿಸಿದರು.

ಡಿವಿಲಿಯರ್ಸ್ ಹಾಗೂ ಎಡಗೈ ದಾಂಡಿಗ ಮೊಯಿನ್ ಅಲಿ (50, 32 ಎಸೆತ, 1 ಬೌಂಡರಿ, 5 ಸಿಕ್ಸರ್) ಭರ್ಜರಿ ಆಟವಾಡಿದರು. ಆಗಾಗ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿದ ಈ ಜೋಡಿ ಮೂರನೇ ವಿಕೆಟ್‌ಗೆ 95 ರನ್ ಸೇರಿಸಿತು. ಈ ವೇಳೆ ಮಾಲಿಂಗ ಅವರು ಮೊಯಿನ್ ವಿಕೆಟ್ ಪಡೆದರು. ಸ್ಟೋನಿಸ್ (0) ಶೀಘ್ರ ವಿಕೆಟ್ ಒಪ್ಪಿಸಿದರು. ವಿಲಿಯರ್ಸ್ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಮುಂಬೈ ಪರ ಬೌಲಿಂಗ್‌ನಲ್ಲಿ ಲಸಿತ್ ಮಾಲಿಂಗ (31ಕ್ಕೆ 4 ) ಉತ್ತಮ ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News