ವೆಲ್ಲೂರು ಚುನಾವಣೆ ರದ್ದು?

Update: 2019-04-16 04:05 GMT

ವೆಲ್ಲೂರು, ಎ.16: ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿಗೆ ಸೇರಿದ ಕಟ್ಟಡವೊಂದರಿಂದ 11 ಕೋಟಿ ರೂಪಾಯಿ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ಷೇತ್ರದ ಚುನಾವಣೆಯನ್ನು ರದ್ದುಪಡಿಸುವುದು ಬಹುತೇಕ ಖಚಿತ ಎಂದು ಉನ್ನತ ಮೂಲಗಳು ಹೇಳಿವೆ.

ಡಿಎಂಕೆ ಮುಖಂಡ ಹಾಗೂ ಡಿಎಂಕೆ ಖಜಾಂಚಿ ದೊರೈ ಮುರುಗನ್ ಅವರ ಆಪ್ತ ಪೂಂಜೊಲೈ ಶ್ರೀನಿವಾಸನ್ ಎಂಬುವವರಿಗೆ ಸೇರಿದ ಗೋದಾಮಿನ ಮೇಲೆ ದಾಳಿ ನಡೆಸಿದ ತೆರಿಗೆ ಇಲಾಖೆ ಅಧಿಕಾರಿಗಳು 11 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದರು.

ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿಯ ವರದಿ ಹಿನ್ನೆಲೆಯಲ್ಲಿ, ವೆಲ್ಲೂರು ಕ್ಷೇತ್ರದ ಚುನಾವಣೆ ರದ್ದುಪಡಿಸಬೇಕೇ ಎಂಬ ಬಗ್ಗೆ ಆಯೋಗ ಮಂಗಳವಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದಿಂದಾಗಿ ಚುನಾವಣಾ ವಾತಾವರಣ ಹದಗೆಟ್ಟಿದೆಯೇ ಎಂಬುದನ್ನೂ ಆಯೋಗ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆ ಅಧಿಕಾರಿಗಳ ಈ ದಾಳಿ ರಾಜಕೀಯ ಪ್ರೇರಿತ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಇದು ನಮ್ಮನ್ನು ಭಯಪಡಿಸುವ ಹುನ್ನಾರ ಎಂದು ಅವರು ದಾಳಿಯ ಬಳಿಕ ಹೇಳಿಕೆ ನೀಡಿದ್ದರು.

ವೆಲ್ಲೂರು ಕ್ಷೇತ್ರದ ಚುಣಾವಣೆ ರದ್ದಾದಲ್ಲಿ, ಇತ್ತೀಚಿನ ದಿನಗಳಲ್ಲಿ ಲಂಚ ಆರೋಪದಲ್ಲಿ ಚುನಾವಣೆ ರದ್ದಾದ ಮೊದಲ ಪ್ರಕರಣವಾಗಲಿದೆ. 2016 ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ಮತದಾರರಿಗೆ ಲಂಚ ನೀಡುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಯೋಗ, ತಂಜಾವೂರು ಮತ್ತು ಅರವಕುರಿಚಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು ರದ್ದುಪಡಿಸಿತ್ತು. ಎಐಎಡಿಎಂಕೆ ನಾಯಕಿ ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆ ವೇಳೆ 2017ರಲ್ಲಿ ಇಂಥದ್ದೇ ಆರೋಪದ ಹಿನ್ನೆಲೆಯಲ್ಲಿ ಚುನಾವಣೆ ರದ್ದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News