ವಯನಾಡಿನಲ್ಲಿ ರಾಹುಲ್ ಗಾಂಧಿ ಪಾಕ್ ಧ್ವಜ ಹಾರಿಸಿದ್ದಾರೆಂದು ಸುಳ್ಳು ಹೇಳಿದ ಶೋಭಾ ಕರಂದ್ಲಾಜೆ

Update: 2019-04-16 15:39 GMT

ಮೂಡಿಗೆರೆ, ಎ.16: ವಯನಾಡಿನಲ್ಲಿ ಚುನಾವಣಾ ಪ್ರಚಾರದ ಸಂದರ್ಭ ರಾಹುಲ್ ಗಾಂಧಿ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತೊಂದು ಸುಳ್ಳು ಹೇಳಿದ್ದಾರೆ. ಈ ಹಿಂದೆಯೂ ‘ಹತ್ಯೆಗೀಡಾದ ಹಿಂದೂ ಯುವಕರ ಪಟ್ಟಿ’ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೌಚಾಲಯಗಳ ನಿರ್ಮಾಣ ವಿಚಾರದಲ್ಲಿ ಸುಳ್ಳು ಹೇಳಿ ಶೋಭಾ ಸುದ್ದಿಯಾಗಿದ್ದರು.

ಮೂಡಿಗೆರೆಯಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಬಳಿಕ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, “ದೇಶ ದ್ರೋಹಿಗಳನ್ನು ಹತ್ತಿಕ್ಕಿ ಧರ್ಮ ಸಂಸ್ಕಾರ ರಾಷ್ಟ್ರ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಎಲ್ಲಾ ರಾಷ್ಟ್ರದ ಪ್ರಧಾನಿಗಳಿಗಿಂತಲೂ ಪ್ರಭಾವಿಯಾಗಿದ್ದು, ರಷ್ಯಾದ ಪ್ರಶಸ್ತಿ ಪಡೆದಿದ್ದಾರೆ. ಅಮೇರಿಕಾದ ಸಂಸತ್ತಿನಲ್ಲಿ ಅವರು ಭಾಷಣ ಮಾಡಿದಾಗ ಅಲ್ಲಿನ ಸಂಸದರು 15 ಬಾರಿ ಎದ್ದು ನಿಂತು ಗೌರವ ನೀಡಿದ್ದಾರೆ. ಇಂತಹ ಪ್ರಧಾನಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಭಾಗ್ಯವನ್ನು ದೇಶದ ಜನ ನೀಡಲು ತುದಿಗಾಲಲ್ಲಿ ನಿಂತಿದ್ದಾರೆಂದು ಎಂದು ಹೇಳಿದರು.

“ಪುಲ್ವಾಮ ಘಟನೆಯಲ್ಲಿ 44 ಯೋಧರನ್ನು ಉಗ್ರರು ಬಲಿ ಪಡೆದಾಗ ಅದಕ್ಕೆ ಮೋದಿ ಸರಕಾರ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿ ಉಗ್ರರ ನೆಲೆಯನ್ನು ನಾಶಪಡಿಸಿ 400 ಉಗ್ರರನ್ನು ಕೊಂದು ಹಾಕಿದೆ. ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರದ ಮೇಲೆ ನಂಬಿಕೆ ಕಳೆದುಕೊಂಡ ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಪಲಾಯನ ಮಾಡಿ, ಅಲ್ಲಿ ಸ್ಪರ್ಧಿಸಿದ್ದಾರೆ. ಚುನಾವಣೆ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿ ದೇಶದ್ರೋಹವೆಸಗಿದ್ದಾರೆ” ಎಂದು ಆರೋಪಿಸಿದ್ದರು.

ಆದರೆ ವಯನಾಡಿನಲ್ಲಿ ರಾಹುಲ್ ಗಾಂಧಿ ಪಾಕ್ ಧ್ವಜ ಹಾರಿಸಿದ್ದಾರೆಯೇ ಎನ್ನುವ ಬಗ್ಗೆ ವಾಸ್ತವಾಂಶ ಪರಿಶೀಲಿಸಿದರೆ ಸಿಗುವ ಉತ್ತರ ‘ಇಲ್ಲ’ ಎನ್ನುವುದು.

ವಾಸ್ತವವೇನು?

ಅಮೇಥಿಯ ಜೊತೆಗೆ ವಯನಾಡ್ ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲು ವಯನಾಡ್ ಗೆ ಆಗಮಿಸಿದ್ದರು. ಈ ಸಂದರ್ಭ ಅಲ್ಲಿ ಹಸಿರು ಬಾವುಟಗಳನ್ನು ಹಾರಿಸಲಾಗಿತ್ತು. ಆದರೆ ಇದು ಮುಸ್ಲಿಂ ಲೀಗ್ ನ ಬಾವುಟವೇ ಹೊರತು, ಪಾಕಿಸ್ತಾನದ್ದಲ್ಲ. ಮುಸ್ಲಿಂ ಲೀಗ್ ಮತ್ತು ಪಾಕಿಸ್ತಾನದ ಬಾವುಟಗಳ ನಡುವಿನ ವ್ಯತ್ಯಾಸಗಳನ್ನು ಈ ಕೆಳಗಿನ ಫೋಟೊಗಳ ಮೂಲಕ ತಿಳಿದುಕೊಳ್ಳಬಹುದು.

ರಾಹುಲ್ ಗಾಂಧಿ ವಯನಾಡಿನಲ್ಲಿ ಯಾವುದೇ ಬಾವುಟವನ್ನು ಹಾರಿಸಿಲ್ಲ. ಅವರ ಬೆಂಬಲಕ್ಕೆ ಆಗಮಿಸಿದ ಜನರು ಮುಸ್ಲಿಂ ಲೀಗ್ ಬಾವುಟಗಳನ್ನು ಹಾರಿಸಿದ್ದರು. ಇದಾದ ನಂತರ ಬಿಜೆಪಿ ಪರ ಫೇಸ್ಬುಕ್ ಪೇಜ್ ಗಳಲ್ಲಿ, ಟ್ವಿಟರ್, ವಾಟ್ಸ್ಯಾಪ್ ಗಳಲ್ಲಿ ‘ರಾಹುಲ್ ಗಾಂಧಿ ರ್ಯಾಲಿಯಲ್ಲಿ ಪಾಕಿಸ್ತಾನದ ಬಾವುಟ’ ಎಂದು ಸುಳ್ಳು ಹರಡಲಾಗಿತ್ತು. ನಂತರ ಹಲವು ಮಾಧ್ಯಮಗಳು ಈ ಬಗ್ಗೆ ‘ಫ್ಯಾಕ್ಟ್ ಚೆಕ್’ ನಡೆಸಿ ವಾಸ್ತವಾಂಶಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದವು. ಇದೀಗ ಶೋಭಾ ಹಳೆಯ ಸುಳ್ಳಿಗೆ ಜೋತುಬಿದ್ದು, ಹೊಸ ಹೇಳಿಕೆ ನೀಡಿದ್ದಾರೆ.

ಶೋಭಾ ಸುಳ್ಳು ಇದೇ ಮೊದಲೇನಲ್ಲ!

ಶೋಭಾ ಕರಂದ್ಲಾಜೆಯವರು ತಪ್ಪು ಮಾಹಿತಿ ನೀಡುತ್ತಿರುವುದು ಇದು ಮೊದಲೇನಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದಾಗ ‘ರಾಜ್ಯದಲ್ಲಿ ಹಿಂದೂಗಳು / ಸಂಘ ಪರಿವಾರ ಕಾರ್ಯಕರ್ತರ ಕೊಲೆ ಅವ್ಯಾಹತವಾಗಿ ನಡೆಯುತ್ತಿವೆ’ ಎಂದು ಆರೋಪಿಸಿ ಇವುಗಳ ಎನ್ ಐಎ ತನಿಖೆಗೆ ಆಗ್ರಹಿಸಿ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ ಪತ್ರವೊಂದನ್ನು ಬರೆದಿದ್ದರು. ಆದರೆ ಶೋಭಾ ನೀಡಿದ್ದ ಪಟ್ಟಿಯಲ್ಲಿದ್ದ ಒಬ್ಬರು ಜೀವಂತವಿದ್ದು, ಉದ್ಯೋಗ ಮಾಡಿಕೊಂಡಿದ್ದರು. ಪಟ್ಟಿಯಲ್ಲಿದ್ದ ಇನ್ನೂ ಕೆಲವರ ಸಾವು ಆತ್ಮಹತ್ಯೆ, ಅಪಘಾತ ಹೀಗೆ ನಾನಾ ಕಾರಣಗಳಿಂದಾಗಿತ್ತು.

ಈ ಘಟನೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದ್ದು, ನಂತರ ಸಂಸದೆ ವಿಷಾದ ವ್ಯಕ್ತಪಡಿಸಿದ್ದರು.

ಇದಾದ ಬಳಿಕ ಇತ್ತೀಚೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 5 ವರ್ಷಗಳಲ್ಲಿ 2 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಶೋಭಾ ಹೇಳಿದ್ದರು. ಆದರೆ ಸರಕಾರಿ ದಾಖಲೆಗಳು ಈ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿತ್ತು. ಉಡುಪಿ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಕೇವಲ 28,636 ಶೌಚಾಲಯಗಳನ್ನು ಮತ್ತು ಚಿಕ್ಕಮಗಳೂರಿನಲ್ಲಿ 2012ರಿಂದ 2018ರವರೆಗೆ 69,418 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಕರಂದ್ಲಾಜೆಯವರ ಈ ಸುಳ್ಳು ಕೂಡ ಭಾರೀ ವಿವಾದ ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News