ವಿಶ್ವಕಪ್ ನಲ್ಲಿ ಆಡಲಿರುವ ಪುಣೆಯ ಪ್ರಥಮ ಕ್ರಿಕೆಟಿಗ ಕೇದಾರ್ ಜಾಧವ್

Update: 2019-04-16 19:12 GMT

ಪುಣೆ, ಎ.16: ಐಸಿಸಿ ವಿಶ್ವಕಪ್‌ಗೆ ಸ್ಥಾನ ಪಡೆದಿರುವ ಮೊದಲ ಪುಣೆಯ ಆಟಗಾರನಾಗಿದ್ದಾರೆ ಕೇದಾರ್ ಜಾಧವ್. ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ 50 ಓವರ್‌ಗಳ ಮಾದರಿಯ ವಿಶ್ವಕಪ್ ಕ್ರಿಕೆಟ್‌ಗೆ 15 ಸದಸ್ಯರ ಭಾರತ ತಂಡದಲ್ಲಿ ಅವರು ಸ್ಥಾನ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನಿಂದ ಆಯ್ಕೆಯಾಗಲ್ಪಟ್ಟ ಮೊದಲ ಆಟಗಾರನೂ ಆಗಿದ್ದಾರೆ ಕೇದಾರ್.

‘‘ಮಧ್ಯಮ ಕ್ರಮಾಂಕದ ದಾಂಡಿಗ ಹಾಗೂ ಬೌಲಿಂಗ್‌ನಲ್ಲೂ ಕೊಡುಗೆ ನೀಡಬಲ್ಲ 34 ವರ್ಷದ ಆಟಗಾರ ಬಹಳ ದಿನಗಳ ಹಿಂದೆಯೇ ವಿಶ್ವಕಪ್‌ಗೆ ಆಯ್ಕೆಗೊಳ್ಳಲು ದೃಷ್ಟಿ ನೆಟ್ಟಿದ್ದರು’’ ಎಂದು ರಾಷ್ಟ್ರೀಯ ತಂಡದ ಮಾಜಿ ಆಯ್ಕೆಗಾರ ಸುರೇಂದ್ರ ಭಾವೆ ಹೇಳುತ್ತಾರೆ. 2013-14ರ ರಣಜಿ ಋತುವಿನಲ್ಲಿ ಮಹಾರಾಷ್ಟ್ರ ತಂಡ ಫೈನಲ್ ತಲುಪುವಲ್ಲಿ ಕೋಚ್ ಆಗಿ ಪ್ರಮುಖ ಪಾತ್ರ ವಹಿಸಿದ್ದರು ಭಾವೆ. ಇದೇ ಸಂದರ್ಭದಲ್ಲಿ ಕೇದಾರ್ ಉತ್ತಮ ಪ್ರದರ್ಶನದಿಂದ ಗಮನಸೆಳೆದಿದ್ದರು. ನೈಜ ಮೆರಿಟ್ ಆಧಾರದಲ್ಲಿ ಕೇದಾರ್ ಆಯ್ಕೆ ನಡೆದಿದೆ ಎಂದು ಭಾವೆ ಹೇಳುತ್ತಾರೆ. 2013-14ರ ಸಾಲಿನ ರಣಜಿ ಋತು ಜಾಧವ್ ವೃತ್ತಿಜೀವನಕ್ಕೆ ತಿರುವು ನೀಡಿತ್ತು. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಜೇಯ ಶತಕದೊಂದಿಗೆ ಮುಂಬೈ ತಂಡವನ್ನು ಟೂರ್ನಿಯಿಂದ ಹೊರಗಟ್ಟಿದ್ದು ಸೇರಿದಂತೆ ಜಾಧವ್ ಆ ಟೂರ್ನಿಯಲ್ಲಿ 1,000ಕ್ಕಿಂತ ಹೆಚ್ಚು ರನ್ ಗಳಿಸಿದ್ದರು. ಆ ಋತುವಿಗಿಂತ ಒಂದು ವರ್ಷ ಮುಂಚೆ ಅವರು ಉತ್ತರಪ್ರದೇಶ ತಂಡದ ವಿರುದ್ಧ ತ್ರಿಶತಕ ಬಾರಿಸಿದ್ದರು. ಆದಾಗ್ಯೂ ಮಹಾರಾಷ್ಟ್ರ ತಂಡ ಎಲೈಟ್ ಡಿವಿಜನ್ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿತ್ತು.

ಹೃಷಿಕೇಶ್ ಕಾನಿಟ್ಕರ್ (1997-2000 ಅವಧಿಯಲ್ಲಿ 34 ಪಂದ್ಯಗಳು) ಹಾಗೂ ಅಭಿಜೀತ್ ಕಾಳೆ ( 2003, ಒಂದು ಏಕದಿನ ಪಂದ್ಯ) ಮಾತ್ರ ಪುಣೆಯಿಂದ ಭಾರತ ತಂಡವನ್ನು ಏಕದಿನ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ ಇತರ ಆಟಗಾರರಾಗಿದ್ದಾರೆ. ಏಕದಿನ ಯುಗ ಆರಂಭವಾಗುವ ಮೊದಲು ಪುಣೆ ಹಾಗೂ ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಯ ದಿಗ್ಗಜ ಚಂದು ಬೋರ್ಡೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

   ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (2010, 2013ರಿಂದ 2015), ಕೇರಳ ಟಸ್ಕರ್ಸ್ (2011), ರಾಯಲ್ ಚಾಲೆಂಜರ್ಸ್ ಬೆಂಗಳೂರು (2016 ಹಾಗೂ 2017) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (2018 ಹಾಗೂ 2019) ಪರ ಆಡಿದ್ದಾರೆ ಕೇದಾರ್. 2014ರಿಂದ ಜಾಧವ್ ಭಾರತದ ಪರ 59 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಮಹಾರಾಷ್ಟ್ರ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ವರ್ಷಗಳ ಕಾಲ ಆಡುವುದು ಜಾಧವ್ ಮಹತ್ವಾಕಾಂಕ್ಷೆಯಾಗಿರಲಿಲ್ಲ. ಉನ್ನತ ಹಂತದಲ್ಲಿ ಆಡುವುದನ್ನು ಆತ ಯಾವಾಗಲೂ ಬಯಸುತ್ತಿದ್ದ. ಇದು ಆತನಿಗೆ ತನ್ನ ಆಟದ ಜಡತ್ವದ ಬಗ್ಗೆ ಜಾಗರೂಕನಾಗಿಸಿತು. ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರನ್ನು ಪ್ರಭಾವಿಸಲು ತನಗೆ ಒಂದೇ ಒಂದು ಋತುವಿನ ಮಹತ್ವದ ಪ್ರದರ್ಶನ ಅಗತ್ಯ ಎಂದು ಆತನಿಗೆ ವಿಶ್ವಾಸವಾಗಿತ್ತು.

ಸುರೇಂದ್ರ ಭಾವೆ, ಮಹಾರಾಷ್ಟ್ರ ತಂಡದ ಮಾಜಿ ಕೋಚ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News