ಕನ್ನಡದ ದಿನಪತ್ರಿಕೆ ವಿರುದ್ಧ ಚು.ಆಯೋಗಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ದೂರು

Update: 2019-04-17 14:27 GMT

ಬೆಂಗಳೂರು, ಎ.17: ಕನ್ನಡದ ದಿನಪತ್ರಿಕೆಯೊಂದು ಎ.16ರಂದು ತನ್ನ ಎರಡನೆ ಪುಟದಲ್ಲಿ ‘ಮತ್ತೆ ಪ್ರತ್ಯೇಕ ಕಿಡಿ ಹೊತ್ತಿಸಿದ ಎಂ.ಬಿ.ಪಾಟೀಲ್’ ಎಂಬ ತಲೆ ಬರಹದಡಿ ಒಂದು ಲೇಖನವನ್ನು ಪ್ರಕಟಿಸಿದೆ. ಅದರಲ್ಲಿ ವಿಜಯಪುರದ ಬಿಎಲ್‌ಇಡಿ ಸಂಸ್ಥೆಯ ಲೆಟರ್‌ಹೆಡ್ ಅನ್ನು ನಕಲಿಯಾಗಿ ಸೃಷ್ಟಿಸಿದ ಪತ್ರವನ್ನು ಪ್ರಕಟ ಮಾಡಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪತ್ರವನ್ನು ಕುಚೋದ್ಯತನದಿಂದ ಮತ್ತು ದುರುದ್ದೇಶದಿಂದ ನನ್ನ ಹೆಸರಿಗೆ ಕಳಂಕ ತರುವ, ನನ್ನ ತೇಜೋವಧೆ ಮಾಡುವ ಮತ್ತು ಮತದಾರರಲ್ಲಿ ಗೊಂದಲ ಹುಟ್ಟಿಸುವ ಸಲುವಾಗಿ ಸೃಷ್ಟಿಸಲಾಗಿದೆ ಎಂದು ದೂರಿದರು.

2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 2-3 ದಿನಗಳ ಮೊದಲು ಈ ತರಹದ ಆರೋಪವನ್ನು ನನ್ನ ಮೇಲೆ ಮಾಡಿ ಇದೇ ಪತ್ರವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಈ ಸಂಬಂಧ ನಾನು ರಾಜ್ಯ ಮತ್ತು ರಾಷ್ಟ್ರಮಟ್ಟದ ಸುದ್ದಿ ಸಂಸ್ಥೆಗಳಿಗೆ ಮತ್ತು ಪತ್ರಿಕೆಗಳಿಗೆ ನನ್ನ ಹೇಳಿಕೆಯನ್ನು ಕೊಟ್ಟಿದ್ದೇನೆ ಎಂದು ಅವರು ಹೇಳಿದರು. ವಸ್ತುಸ್ಥಿತಿ ಹೀಗಿರುವಾಗ ಎ.18 ಮತ್ತು 23ರಂದು ಕರ್ನಾಟಕದಲ್ಲಿ ಮತದಾನ ಇರುವಾಗ ಮತದಾರರಲ್ಲಿ ಗೊಂದಲ ಹುಟ್ಟಿಸಲು ಮತ್ತು ನನ್ನ ಗೌರವಕ್ಕೆ ಕಳಂಕ ತರುವ ಉದ್ದೇಶದಿಂದ ಈ ಪತ್ರವನ್ನು ಮತ್ತೆ ಪ್ರಕಟಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದರು.

ಈ ಪತ್ರವನ್ನು ನಾನು ಬರೆದಿಲ್ಲ, ನಾನು ಬರೆದಂತೆ ಅದನ್ನು ನಕಲಿಯಾಗಿ ಕುಚೋದ್ಯತನದಿಂದ ನನ್ನ ತೇಜೋವಧೆ ಮಾಡಲು ಮತ್ತು ಮತದಾರರಲ್ಲಿ ಗೊಂದಲ ಮೂಡಿಸಲು ಸೃಷ್ಟಿಸಿದ್ದು, ಅದರ ಕುರಿತು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಷನಲ್ ಅಸೋಸಿಯೇಷನ್ (ಬಿಎಲ್‌ಇಡಿ) 110 ವರ್ಷ ಹಳೆಯದಾದ ಪ್ರತಿಷ್ಠಿತ ಸಂಸ್ಥೆಯಾಗಿದೆ. 110ಕ್ಕೂ ಹೆಚ್ಚು ಶಾಲೆ, ಕಾಲೇಜುಗಳಲ್ಲಿ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ರೀತಿಯ ಅಪಪ್ರಚಾರದಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಅವರು ತಿಳಿಸಿದರು.

ನಮ್ಮ ಲೆಟರ್ ಹೆಡ್‌ನಲ್ಲಿ ಟೆಲಿಫೋನ್ ನಂಬರ್, ವೆಬ್‌ಸೈಟ್, ಪಿನ್‌ಕೋಡ್ ನಮೂದಾಗಿದ್ದು, ನಕಲಿ ಪತ್ರದಲ್ಲಿ ಇವು ಯಾವುದು ಇಲ್ಲ. ನಕಲಿ ಪತ್ರದಲ್ಲಿ ನಮೂದಾಗಿರುವ ದಿನಾಂಕ ಮತ್ತು ಕಡತ ಸಂಖ್ಯೆ ಪರಿಶೀಲಿಸಿದಾಗ, ನಮ್ಮ ಸಂಸ್ಥೆಯಿಂದ ಆ ದಿನಾಂಕದಂದು ಈ ಕಡತ ಸಂಖ್ಯೆಯಲ್ಲಿ ಯಾವುದೇ ಪತ್ರ ರವಾನೆಯಾಗಿಲ್ಲ ಎಂದು ಅವರು ತಿಳಿಸಿದರು.

ಈ ಸಂಬಂಧ ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೇನೆ. ಅಲ್ಲದೇ, ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಲಾಗಿದೆ. ಚುನಾವಣಾ ಆಯೋಗ ಹಾಗೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News