ಬೆಂಗಳೂರು: ಮೊದಲ ಮಳೆಗೆ ಬೈಕ್ ಸವಾರ ಸಾವು, ಮರಗಳು ಧರೆಗೆ

Update: 2019-04-17 14:42 GMT

ಬೆಂಗಳೂರು, ಎ.17: ನಗರದಲ್ಲಿ ಸುರಿದ ಮೊದಲ ಮಳೆಗೆ ಮರ ಬಿದ್ದು ಬೈಕ್ ಸವಾರ ಸಾವನ್ನಪ್ಪಿ, ನಗರದ ನಾನಾ ಭಾಗಗಳಲ್ಲಿ ಸುಮಾರು 16 ಮರಗಳು ಧರೆಗುರುಳಿವೆ.

ಕುಣಿಗಲ್ ಮೂಲದ ಕಿರಣ್ ಸಾವನ್ನಪ್ಪಿರುವ ಬೈಕ್ ಸವಾರ. ಇವರು ಕೊರಿಯರ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲಸದ ನಿಮಿತ್ತ ನಗರದ ಲುಂಬಿನಿ ಗಾರ್ಡನ್ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಮರ ಬಿದ್ದು ಸಾವನ್ನಪ್ಪಿದ್ದಾರೆ. ಹೆಬ್ಬಾಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

16 ಮರ ಧರೆಗೆ: ನಗರದಲ್ಲಿ ಸುರಿದ ಮಳೆಯಿಂದಾಗಿ ಜಯನಗರ, ನಾಗರಬಾವಿ, ಆರ್.ಟಿ.ನಗರ, ನಾಗವಾರ ಸೇರಿ ನಗರದ ಹಲವೆಡೆ ಸುಮಾರು 16ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಇದರಿಂದಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಹಾಗೂ ಹಲವೆಡೆ ವಾಹನ ದಟ್ಟಣೆ ಸಂಭವಿಸಿದೆ.

ಜನತೆಯ ಆಕ್ರೋಶ: ಒಂದು ಸಾಧಾರಣ ಮಳೆಗೆ ಮರಗಳು ಧರೆಗುರುಳಿ ಬೈಕ್ ಸವಾರನೋರ್ವ ಸಾವನ್ನಪ್ಪುವಂತಾಗಿದೆ. ಮಳೆಗಾಲದ ಮುನ್ಸೂಚನೆಯಾಗಿ ಬಿಬಿಎಂಪಿ ಯಾವುದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕೆಂದು ನಗರದ ಜನತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News