ಸಚಿವರಿಗೆ ಬೆದರಿಕೆ ಆರೋಪ: ನಕಲಿ ಡಿವೈಎಸ್ಪಿ ಬಂಧನ

Update: 2019-04-17 14:45 GMT

ಬೆಂಗಳೂರು, ಎ.17: ರಾಜ್ಯ ಸರಕಾರದ ಸಚಿವರೊಬ್ಬರಿಗೆ ಎಸಿಬಿ ಹೆಸರಿನಲ್ಲಿ ಬೆದರಿಕೆ ಹಾಕಿದ್ದ ಆರೋಪದಡಿ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈತ ಡಿವೈಎಸ್ಪಿ ಎಂದು ಹೇಳಿಕೊಂಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬೆಳಗಾವಿಯ ಮೂಲದ ಮುರುಗಪ್ಪ ನಿಂಗಪ್ಪ ಕುಂಬಾರ ಎಂಬಾತ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಸಚಿವರು, ಗುತ್ತಿಗೆದಾರರಿಗೆ ಕರೆ ಮಾಡುತ್ತಿದ್ದ ಈತ ತಾನು ಎಸಿಬಿ ಡಿವೈಎಸ್ಪಿ ಬಾಲರಾಜ್ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಹಣ ನೀಡದೆ ಇದ್ದರೆ, ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದ. ಕೆಲವರಿಂದ ಹಣ ಪಡೆದು, ಹೊರರಾಜ್ಯದ ಬ್ಯಾಂಕ್‌ಗಳಲ್ಲಿರುವ ಖಾತೆಗಳಿಗೆ ರವಾನೆ ಮಾಡಿಸಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ.

2017ರಿಂದಲೂ ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಆರೋಪಿ, ಮಹಾರಾಷ್ಟ್ರದ ಲಾಡ್ಜ್‌ನಲ್ಲಿ ಕುಳಿತು ನೂರಾರು ಮಂದಿಗೆ ಬೆದರಿಕೆ ಹಾಕುತ್ತಿದ್ದ. ಕೊನೆಯ ಬಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕರೆ ಮಾಡಿದ್ದ ಅಸಾಮಿ, ಹಣಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.

ಈ ಸಂಬಂಧ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮಹಾರಾಷ್ಟ್ರದಲ್ಲಿ ಆರೋಪಿ ಮುರುಗಪ್ಪನನ್ ಬಂಧಿಸಿದ್ದಾರೆ.

1986 ರಲ್ಲಿ ಬೆಳಗಾವಿಯ ಸವದತ್ತಿಯಲ್ಲಿ ಸಿವಿಲ್ ಪೊಲೀಸ್ ಪೇದೆಯಾಗಿ ಕೆಲಸಕ್ಕೆ ಸೇರಿದ್ದ ಮುರುಗಪ್ಪ, ಕರ್ತವ್ಯಲೋಪ, ಭ್ರಷ್ಟಚಾರದ ಆರೋಪದ ಮೇಲೆ 1996ರಲ್ಲಿ ಕೆಲಸದಿಂದ ವಜಾ ಮಾಡಲಾಗಿತ್ತು. ನಂತರ ಇದನ್ನೇ ವೃತ್ತಿ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News