ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋಪ: ನಾಲ್ವರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ

Update: 2019-04-17 15:32 GMT

ಬೆಂಗಳೂರು, ಎ.17: ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ರಾಜಕೀಯ ಪಕ್ಷವೊಂದರ ಮುಖಂಡರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿ ಬಂದ ಹಿನ್ನೆಲೆ ಯಶವಂತಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು, ಯಶವಂತಪುರ ಉಪವಿಭಾಗದ ಎಸಿಪಿ ರವಿಪ್ರಸಾದ್ ಪಿ-ಸಿಸಿಬಿ ವಿಭಾಗದ ತನಿಖಾಧಿಕಾರಿ, ಜ್ಞಾನಭಾರತಿ ಇನ್ಸ್‌ಪೆಕ್ಟರ್ ವಿ.ಶಿವಾರೆಡ್ಡಿ-ರಾಜ್ಯ ಗುಪ್ತಚರ ವಿಭಾಗ, ಯಶವಂತಪುರ ಇನ್ಸ್‌ಪೆಕ್ಟರ್ ಮುದ್ದುರಾಜು-ಆಂತರಿಕ ಸುರಕ್ಷಾ ವಿಭಾಗ ಹಾಗೂ ಪೀಣ್ಯ ಠಾಣೆಯ ಇನ್ಸ್‌ಪೆಕ್ಟರ್ ವಿ.ಟಿ.ಶ್ರೀನಿವಾಸ್-ಸಿಐಡಿ ಗೆ ವರ್ಗಾವಣೆಗೊಳಿಸಿದ್ದಾರೆ.

ಈ ನಾಲ್ವರು ಪೊಲೀಸ್ ಅಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರ ಪರವಾಗಿ ಚುನಾವಣಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಸಾರ್ವಜನಿಕರಿಂದ ಚುನಾವಣಾ ಆಯೋಗಕ್ಕೆ ಹಲವು ದೂರು ಕೇಳಿಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಚುನಾವಣಾಧಿಕಾರಿ ತನಿಖೆ ಕೈಗೊಳ್ಳುವಂತೆ ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರಿಗೆ ಸೂಚಿಸಿದ್ದರು.

ಈ ಸಂಬಂಧ ಬೆಂಗಳೂರು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಹಾಗೂ ಬೆಂಗಳೂರು ರೈಲ್ವೆ ಪೊಲೀಸ್ ಪ್ರಧಾನ ನಿರ್ದೇಶಕಿ ಡಿ.ರೂಪ ಮೌದ್ಗಿಲ್ ಅವರನ್ನು ಒಳಗೊಂಡ ತಂಡವನ್ನು ರಚಿಸಿ ತನಿಖೆ ಆದೇಶಿದ್ದರು.

ಹಿರಿಯ ಅಧಿಕಾರಿಗಳಾದ ಶಿವಯೋಗಿ ಕಳಸದ್ ಮತ್ತು ಡಿ.ರೂಪಾ ಮೌದ್ಗಿಲ್ ಅವರ ತಂಡ ಎ.15ರಂದು ತನಿಖಾ ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ನೀಡಿತ್ತು. ಇದನ್ನು ಆಧರಿಸಿ ಇಲಾಖೆಯ ಕರ್ತವ್ಯದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ನಾಲ್ವರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News