ಅಕ್ರಮ ಗಣಿಗಾರಿಕೆ: ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀಗೆ ಹೈಕೋರ್ಟ್ ನೋಟಿಸ್

Update: 2019-04-17 15:45 GMT

ಬೆಂಗಳೂರು, ಎ.17: ಅಕ್ರಮ ಗಣಿಗಾರಿಕೆ ಆರೋಪದಿಂದ ಗಣಿ ಉದ್ಯಮಿ ಗಾಲಿ ಜನಾರ್ದನರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರನ್ನು ಕೈಬಿಟ್ಟ ನಗರದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಆಶಾ ದೀಪ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಎಸ್.ಆರ್.ಹಿರೇಮಠ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಪ್ರತಿವಾದಿಗಳಾದ ಸಿಬಿಐ ಮತ್ತು ಜಿ.ಲಕ್ಷ್ಮೀ ಅರುಣಾ ಅವರಿಗೆ ನೋಟಿಸ್ ಜಾರಿಗೆ ನ್ಯಾಯಪೀಠ ಆದೇಶಿಸಿದೆ. 

ಪ್ರಕರಣವೇನು: ಮೆಸರ್ಸ್ ಅಸೋಸಿಯೇಟೇಡ್ ಮೈನಿಂಗ್ ಕಂಪೆನಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ದೋಷಾರೋಪ ಪಟ್ಟಿಯಲ್ಲಿ ಜನಾರ್ದನರೆಡ್ಡಿ ಮೊದಲ ಆರೋಪಿ ಮತ್ತು ಅವರ ಪತ್ನಿ ಲಕ್ಷ್ಮೀ ಅರುಣಾ ಎರಡನೆ ಆರೋಪಿಯಾಗಿದ್ದಾರೆ. ಈ ಕುರಿತಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಲಕ್ಷ್ಮೀ ಅರುಣಾ ನಾನು ಕಂಪೆನಿಯ ಮಾಲಕತ್ವ ಹೊಂದಿಲ್ಲ. ಪಾಲುದಾರಳು ಮಾತ್ರ. ಹೀಗಾಗಿ, ಕಂಪೆನಿ ನಡೆಸಿದ ವ್ಯವಹಾರಗಳಿಗೆ ನಾನು ಹೊಣೆಯಲ್ಲ. ಹೀಗಾಗಿ, ನನ್ನ ವಿರುದ್ಧದ ಆರೋಪಗಳನ್ನು ಕೈಬಿಡಬೇಕು ಎಂದು ಕೋರಿದ್ದರು. ಇದನ್ನು ಮಾನ್ಯ ಮಾಡಿದ್ದ ನ್ಯಾಯಾಲಯ, ಲಕ್ಷ್ಮೀ ಅರುಣಾ ವಿರುದ್ಧದ ಆರೋಪಗಳನ್ನು ಕೈಬಿಟ್ಟು 2015ರ ಆ.8ರಂದು ಆದೇಶಿಸಿತ್ತು. ಸಮಾಜ ಪರಿವರ್ತನಾ ಸಮುದಾಯದ ಪರ ವಕೀಲ ಮೋನೇಶ್‌ ಕುಮಾರ್ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News