ಅಪಪ್ರಚಾರಕ್ಕೆ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಸ್ಪಷ್ಟೀಕರಣ

Update: 2019-04-17 16:26 GMT

ಬೆಂಗಳೂರು, ಎ.17: ಬೆಂಗಳೂರು ಕೇಂದ್ರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮೈತ್ರಿ ಅಭ್ಯರ್ಥಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆಂಬ ಸಂದೇಶವುಳ್ಳ ಕರಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಮತದಾರರನ್ನು ದಾರಿತಪ್ಪಿಸುವ ಕ್ರಮ ಎಂದು ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವೆ ಆಹ್ವಾನ ನೀಡಿದರೂ ನಾನು ಯಾವುದೇ ಕಾರಣಕ್ಕೂ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂಬ ನನ್ನ ಅಚಲ ನಿಲುವನ್ನು ತಾವುಗಳೆಲ್ಲರೂ ಗಮನಿಸಿದ್ದೀರಿ. ಈ ಬಗ್ಗೆ ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಮತದಾನದ ಕಡೆಯ ದಿನದಲ್ಲಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂಬ ಈ ರೀತಿ ಅಪಪ್ರಚಾರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂದು ಅವರೇನಾದರೂ ನಂಬಿದ್ದರೆ, ಇದು ಕೇವಲ ಭ್ರಮೆ. ಕಾಂಗ್ರೆಸ್‌ನವರ ಈ ರೀತಿಯ ಅಪಪ್ರಚಾರ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವಂತಹ ದ್ರೋಹ. ಈ ರೀತಿಯ ಅಪಪ್ರಚಾರ ಅವರ ಚುನಾವಣಾ ಅಕ್ರಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಪರ್ಯಾಯ ರಾಜಕಾರಣಕ್ಕಾಗಿ ಹೋರಾಟ ನಡೆಸುತ್ತಿರುವ ನನ್ನ ಪ್ರಯತ್ನಕ್ಕೆ ಈ ರೀತಿಯ ಅಪಪ್ರಚಾರಗಳಿಂದ ಧಕ್ಕೆಯಾಗುವುದಿಲ್ಲ. ಮತದಾರ ಬಂಧುಗಳು ಈ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಗೆಲುವಿನ ಹೊಸ್ತಿಲಲ್ಲಿರುವ ನನ್ನ ವಿಜಯ ಪತಾಕೆಯನ್ನು ಸಹಿಸಲಾಗದ ಕಾಂಗ್ರೆಸ್ಸಿನ ಅಭ್ಯರ್ಥಿ ಈ ರೀತಿಯ ಊಹಾಪೋಹಗಳಿಗೆ ಯಾವುದೇ ರೀತಿಯ ಕಿಮ್ಮತ್ತನ್ನು ನೀಡಬೇಡಿ ಎಂದು ಪ್ರಕಾಶ್ ರಾಜ್ ಮತದಾರರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೂ ದೂರನ್ನು ನೀಡಲಾಗಿದೆ. ಇವರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಪ್ರಕಾಶ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News