ಮೊದಲ ಹಂತದ ಮತದಾನ: ಸಿದ್ಧತೆ ಪರಿಶೀಲನೆ

Update: 2019-04-17 16:34 GMT

ಬೆಂಗಳೂರು, ಎ.17: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ನಾಳೆ (ಎ.18) ಜರುಗಲಿದ್ದು, ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ್ ಪ್ರಸಾದ್, ರಾಜಧಾನಿ ಬೆಂಗಳೂರು ವ್ಯಾಪ್ತಿಯ ಕೆಲ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ 28 ವಿಧಾನಸಭಾ ಕ್ಷೇತ್ರಗಳಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಂದ 8,514 ಮತಟ್ಟೆಗಳಿಗೆ ಇವಿಎಂ, ವಿವಿಪ್ಯಾಟ್ ಯಂತ್ರ ಹಾಗೂ ಚುನಾವಣಾ ಉಪಕರಣಗಳನ್ನು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಸಾಗಿಸಲಾಗುವುದೆಂದು ಹೇಳಿದರು.

ಈಗಾಗಲೇ ಮತ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿಯಾಗಿ ಶೇ.20 ರಷ್ಟು ಇವಿಎಂ ಯಂತ್ರಗಳನ್ನು ಶೇಖರಿಸಿಡಲಾಗಿದೆ. ಯಾವುದೇ ಮತಗಟ್ಟೆಗಳಲ್ಲಾಗಲಿ ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣ ಚುನಾವಣಾಧಿಕಾರಿಗಳು ಅದನ್ನು ಬದಲಿಸುತ್ತಾರೆ.

ಚುನಾವಣೆಗೆ ನೇಮಕ ಮಾಡಿಕೊಂಡಿರುವ 45 ಸಾವಿರ ಸಿಬ್ಬಂದಿಗಳು 28 ಮಸ್ಟರಿಂಗ್ ಕೇಂದ್ರಗಳಿಗೆ ಬಂದು ತಮ್ಮ ಮತಗಟ್ಟೆಗಳ ಮಾಹಿತಿ ಪಡೆಯುತ್ತಾರೆ. ಬಳಿಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕಾದ ಮತಗಟ್ಟೆಗಳ ವಿವರವನ್ನು ಅಧಿಕಾರಿಗಳು ನೀಡುತ್ತಾರೆ. ಬಳಿಕ ಮಸ್ಟರಿಂಗ್ ಕೇಂದ್ರಗಳಿಂದ ಸಿಬ್ಬಂದಿಯನ್ನು ಕರೆದೊಯ್ಯಲು 2 ಸಾವಿರ ಬಿಎಂಟಿಸಿ ಬಸ್ ನಿಯೋಜನೆ ಮಾಡಲಾಗಿದ್ದು, ಸಂಜೆ ವೇಳೆಗೆ ಮತಗಟ್ಟೆಗಳಿಗೆ ಸಿಬ್ಬಂದಿಗಳು ತೆರಳಲಿದ್ದಾರೆ ಎಂದರು.

ಸಂಜೆ 6ರವರೆಗೆ ಮತದಾನ: ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಎಲ್ಲ 8,514 ಮತಗಟ್ಟೆಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆಗಳಲ್ಲಿ ರ್ಯಾಂಪ್, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಚುನಾವಣಾ ಸಿಬ್ಬಂದಿಗಳು ಮತಗಟ್ಟೆಯಲ್ಲೇ ರಾತ್ರಿ ವಾಸ್ತವ್ಯ ಮಾಡುತ್ತಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News