ಹೈಕೋರ್ಟ್ ಸಿಜೆಗೆ ಸಮಾನ ವೇತನ: ಕೆಎಟಿ ಅಧ್ಯಕ್ಷರ ಅರ್ಜಿ ವಜಾ

Update: 2019-04-17 17:44 GMT

ಬೆಂಗಳೂರು, ಎ.17: ಹೈಕೋರ್ಟ್ ಸಿಜೆಗೆ ನೀಡುವಷ್ಟೇ ಸಮಾನ ವೇತನವನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಅಧ್ಯಕ್ಷರಿಗೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 

ಕೆಎಟಿ ಅಧ್ಯಕ್ಷ ಡಾ.ಕೆ.ಭಕ್ತವತ್ಸಲ ತಮಗೆ ಹೈಕೋರ್ಟ್‌ನ ಸಿಜೆಗೆ ನೀಡುವಷ್ಟು ವೇತನ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ಹಂಗಾಮಿ ಸಿಜೆ ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಈ ಬಗ್ಗೆ ವಿವರವಾದ ಆಕ್ಷೇಪಣೆ ಸಲ್ಲಿಸಿದ್ದ ಕೇಂದ್ರ ಸರಕಾರ ಕೆಎಟಿ ಅಧ್ಯಕ್ಷರು ಹೈಕೋರ್ಟ್‌ನ ನ್ಯಾಯಮೂರ್ತಿಗಳು ಪಡೆಯುವಷ್ಟು ಮಾತ್ರ ವೇತನ ಪಡೆಯಲು ಅರ್ಹರು. ಮುಖ್ಯ ನ್ಯಾಯಮೂರ್ತಿಗಳು ಪಡೆಯುವಷ್ಟು ವೇತನ ಪಡೆಯಲು ಅರ್ಹರಲ್ಲ. ಕಾನೂನಿನಲ್ಲಿ ಅದಕ್ಕೆ ಅವಕಾಶವೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಆಡಳಿತಾತ್ಮಕ ನ್ಯಾಯಮಂಡಳಿ ರಚನೆ ಕಾಯಿದೆಯನ್ನು ಉಲ್ಲೇಖಿಸಿದ್ದ ಕೇಂದ್ರ ಸರಕಾರ, ಅದರಲ್ಲಿ ನ್ಯಾಯಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ವೇತನ ನಿಗದಿ ಮಾಡಿಲ್ಲ. ಸೆಕ್ಷನ್ 8(3)ರ ಪ್ರಕಾರ ಕೆಎಟಿ ಅಧ್ಯಕ್ಷರಿಗೆ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸಮಾನ ವೇತನ 80 ಸಾವಿರ ರೂ.ನೀಡಲಾಗುವುದು (ಈಗ ಪರಿಷ್ಕೃರಣೆಯಾಗಿ ತಿಂಗಳಿಗೆ 2.25 ಲಕ್ಷ ) ಎಂದು ಹೇಳಿದೆ.

ಭಕ್ತವತ್ಸಲ ಕೆಎಟಿ ಅಧ್ಯಕ್ಷರ ಹುದ್ದೆ ಹೈಕೋರ್ಟ್‌ನ ಸಿಜೆ ಮತ್ತು ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ ಅಧ್ಯಕ್ಷರ ಹುದ್ದೆಗೆ ಸಮನಾದುದು, ಅವರು ಮಾಡುವಷ್ಟೇ ಕೆಲಸವನ್ನು ತಾವೂ ಮಾಡುವುದರಿಂದ ತಮಗೂ ಅವರಿಗೆ ನೀಡುವಷ್ಟೇ ವೇತನ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News