ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ತಂತ್ರಜ್ಞಾನದ ಮೊರೆ

Update: 2019-04-17 17:46 GMT

ಬೆಂಗಳೂರು, ಎ.17: ಬೆಂಗಳೂರು ಸಂಚಾರಿ ಪೊಲೀಸರು ನಗರದ ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ಹೆಚ್ಚು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸುವ ಕ್ರಮ ಜಾರಿಯಲ್ಲಿದ್ದು, ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಈ ವರ್ಷ ಮೊದಲ ಎರಡು ತಿಂಗಳಲ್ಲಿ ಸುಮಾರು ಎಂಟು ಲಕ್ಷ ಪ್ರಕರಣಗಳು ನೋಂದಣಿಯಾಗಿವೆ. ಒಂದು ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ದಂಡದ ಮೊತ್ತ ಕಳೆದೊಂದು ವರ್ಷದಲ್ಲಿ ಸಂಗ್ರಹವಾದ ದಂಡಕ್ಕೆ ಎರಡು ಪಟ್ಟು ಹೆಚ್ಚಿದೆ.

ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಪ್ರಕಾರ ನಗರದಲ್ಲಿ ಸಂಚಾರಿ ದಟ್ಟಣೆಯ ಪ್ರದೇಶದಲ್ಲಿ 1 ಸಾವಿರಕ್ಕೂ ಅಧಿಕ ಕ್ಯಾಮೆರಾಗಳಲ್ಲಿ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದೆ. ನಾವು 5 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸಿದ್ಧತೆ ನಡೆಸಿದ್ದು, ಇನ್ನೊಂದು ವರ್ಷದಲ್ಲಿ ಇದು ಪೂರ್ಣಗೊಳ್ಳಲಿದೆ. ಹೆಚ್ಚು ತಂತ್ರಜ್ಞಾನ ಬಳಕೆ ಮಾಡಿಕೊಂಡಿದ್ದ ಪರಿಣಾಮ ಅಧಿಕ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮೀಷನರ್ (ಟ್ರಾಫಿಕ್) ಪಿ. ಹರಿಶೇಖರನ್ ಹೇಳಿದ್ದಾರೆ.

ತಂತ್ರಜ್ಞಾನದ ಮೇಲೆ ಹೆಚ್ಚಿನ ಗಮನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ, ಈ ಮೂಲಕ ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತಿದೆ. ರಸ್ತೆ ಬದಿಯಲ್ಲಿ ಬೇರೆ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ವಾಹನ ನಿಲ್ಲಿಸಿದವರಿಗೆ ಚಲನ್ ಜಾರಿಯಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಸಮಯಗಳಲ್ಲಿ ಪೋಲಿಸ್ ಸಿಬ್ಬಂದಿಗಳು ನಿಯಮ ಉಲ್ಲಂಘಿಸಿದವರನ್ನು ತಡೆಯಲು ಅಸಾಧ್ಯವಾಗಿದೆ. ಇದರಿಂದ ಹೆಚ್ಚು ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತದೆ. ಇದೀಗ ಪೋಲೀಸರ ಬದಲಿಗೆ, ತಂತ್ರಜ್ಞಾನವನ್ನು ಬಳಸುವುದು ಮತ್ತು ದಟ್ಟಣೆಯ ಸಮಯದಲ್ಲಿ ಸ್ಥಳದಲ್ಲೇ ಅವರನ್ನು ನಿಯಮ ಪಾಲಿಸುವಂತೆ ಮಾಡುವುದು ಒಳ್ಳೆಯ ಉಪಾಯವಾಗಿದೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಹತ್ತಾರು ವರ್ಷಗಳಿಂದಲೂ ಸ್ವಯಂಚಾಲಿತ ದಂಡ ಸಂಗ್ರಹ ಪದ್ಧತಿಯಿದೆ. ಆದರೆ, ಇಲಾಖೆ ಅತ್ಯುತ್ತಮವಾದ ತಂತ್ರಜ್ಞಾನ ಬಳಕೆ ಮಾಡಿರಲಿಲ್ಲ. ಇದರಿಂದ ಅದು ಪರಿಣಾಮಕಾರಿಯಾಗಿರಲಿಲ್ಲ. ಅದನ್ನು ಆಧುನೀಕರಣಗೊಳಿಸಿದ ಹಿನ್ನೆಲೆಯಲ್ಲಿ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಶೇ. 1ರಷ್ಟು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿರುವುದು ವರದಿಯಾಗಿದೆ. ಅಲ್ಲದೆ, ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ನ್ಯಾಯಾಲಯದಲ್ಲಿ ಅಥವಾ ಆನ್‌ಲೈನ್‌ನಲ್ಲಿ ದಂಡ ಪಾವತಿಸಲು ಹೇಳಿದೆ.

ದಂಡ ಪಾವತಿ ಮಾಡದಿದ್ದಲ್ಲಿ ಅಂತಹವರ ವಿರುದ್ಧ ಅವರ ವಿಳಾಸ ಪತ್ತೆ ಮಾಡಿ ದಂಡ ವಸೂಲಿ ಮಾಡಲು ಓರ್ವ ಪೇದೆ ಇರಲಿದ್ದಾರೆ. ಒಂದೊಮ್ಮೆ ವಿಳಾಸ ತಪ್ಪಾದರೆ ಅಥವಾ ಆ ವ್ಯಕ್ತಿ ವಿಳಾಸ ಬದಲಿಸಿದ್ದರೆ ಆಗ ನಾವು ಅವರನ್ನು ರಸ್ತೆ ಮೇಲೆಯೇ ಹಿಡಿಯಬೇಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News