ಸಿಲಿಕಾನ್ ಸಿಟಿಯಲ್ಲೀಗ ಮಾವಿನ ಘಮಲು

Update: 2019-04-17 17:49 GMT

ಬೆಂಗಳೂರು, ಎ.17: ಸಿಲಿಕಾನ್‌ಸಿಟಿ, ರಾಜ್ಯದ ರಾಜಧಾನಿಗೆ ಮುಂಗಾರು ಪೂರ್ವದಲ್ಲಿಯೇ ಹಣ್ಣುಗಳ ರಾಜನಾದ ಮಾವು ಪ್ರವೇಶವಾಗಿದ್ದು, ಪ್ರಮುಖ ಮಾರುಕಟ್ಟೆ, ರಸ್ತೆಗಳಲ್ಲಿ ಈಗಾಲೇ ಮಾವಿನ ಗಮಲು ಶುರುವಾಗಿದೆ.

ನಗರದ ಪ್ರಮುಖ ಮಾರುಕಟ್ಟೆ, ಹಣ್ಣಿನ ಮಳಿಗೆಗಳು, ಮಾರ್ಕೆಟ್, ಬಜಾರ್‌ಗಳಿಂದ ಹಿಡಿದು ಹಾಪ್‌ಕಾಮ್ಸ್, ತಳ್ಳುಗಾಡಿಗಳು, ಬೀದಿಬದಿ ವ್ಯಾಪಾರ ಮಳಿಗೆಗಳಲ್ಲಿ ಮಾವಿನ ಹಣ್ಣಿನ ರಾಶಿ ಕಾಣುತ್ತಿದ್ದು, ಇಲ್ಲಿನ ಸ್ವಾದಿಷ್ಟ ಮಾವಿನ ಹಣ್ಣುಗಳಿಗೆ ಜನ ಮಾರುಹೋಗಿದ್ದಾರೆ. ಇನ್ನು ಮುಂದಿನ 3-4 ತಿಂಗಳ ಕಾಲ ನಗರದಲ್ಲಿ ಮಾವಿನ ಪಾರುಪತ್ಯ ಮುಂದುವರಿಯಲಿದೆ.

ಈ ಬಾರಿ ಪ್ರಮುಖ ತಳಿಗಳಾದ ಬಾದಾಮಿ, ಮಲ್ಗೊವಾ, ಮಲ್ಲಿಕಾ, ರಸಪೂರಿ, ಹಿಮಾಯತ್, ಸಿಂಧೂರ, ತೋತಾಪುರಿ, ದಶೇರಿ, ಕಾಲಾಪಹಾಡ್, ಕುದಾದಾಸ್, ಸೇರಿದಂತೆ ವಿವಿಧ ತಳಿಗಳು ಮಾರುಕಟ್ಟೆಗೆ ಬಂದಿವೆ. ಈ ತಳಿಯ ಪೈಕಿ ಬಾದಾಮಿ ಹಾಗೂ ಮಲ್ಗೊವಾ ಹಣ್ಣಿಗೆ ಬೇಡಿಕೆ ಹೆಚ್ಚಿದೆ.

ಈ ಬಾರಿ ಇಳುವರಿ: ರಾಜ್ಯದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ತಾಪಮಾನ ಹೆಚ್ಚಿರುವುದರಿಂದ ಹಾಗೂ ಹವಾಮಾನ ವೈಪರೀತ್ಯ ಕಡಿಮೆ ಇರುವುದರಿಂದ ಮಾವುವಿನ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, 10 ಲಕ್ಷ ಟನ್ ಮಾವು ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿದೆ. ಜತೆಗೆ ಇಲ್ಲಿಯವರೆಗೆ ಮಳೆ ಬೀಳದ ಕಾರಣ ಮುಂದೆ ಮೂರು ಹಂತದಲ್ಲಿ ಮಾವು ಕೊಯ್ಲಿಗೆ ಬರಲಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ದರ ಪಟ್ಟಿ (ಕೆ.ಜಿ.ಗೆ): ಆಲ್ಫೋನ್ಸ್ 65, ಅಮರ್‌ಪಾಲಿ 80, ಬೈಗನ್‌ಪಲಿ 99, ಮಲ್ಗೊವಾ 150, ರಸಪೂರಿ-80 ರೂ., ಮಲ್ಲಿಕಾ- 109 ರೂ. ನೀಲಂ- 52, ರಸಪೂರಿ- 96, ಸೆಂಧೂರ- 42 ರೂ. ಕಾಲಾಪಹಡ್-100 ರೂ. ದಶೇರಿ -150ರೂ. ತೊತಾಪುರಿ-40 ರೂ. ಮಾರಾಟವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News