ಹನಿ ನೀರಿಗೆ ಹಪಹಪಿಯ ನಡುವೆ ಮರಾಠವಾಡ, ವಿದರ್ಭದಲ್ಲಿ ಮತದಾನ ಆರಂಭ

Update: 2019-04-18 04:06 GMT

ಒಸ್ಮನಾಬಾದ್: ಹನಿ ನೀರಿಗೂ ಹಪಹಪಿಸುವ ಭೀಕರ ಬರದ ನಡುವೆಯೇ ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಮರಾಠಾವಾಡ ಪ್ರದೇಶದ ಎಂಟು ಜಿಲ್ಲೆಗಳ ಶೇಕಡ 90ರಷ್ಟು ಗ್ರಾಮಗಳನ್ನು ಸರ್ಕಾರ ಕಳೆದ ಡಿಸೆಂಬರ್‌ನಲ್ಲೇ ಬರಪೀಡಿತ ಪ್ರದೇಶಗಳು ಎಂದು ಘೋಷಿಸಿತ್ತು. ವಿದರ್ಭ ಭಾಗದಲ್ಲಿ ಅಕೋಲಾ, ಅಮರಾವತಿ ಮತ್ತು ಬುಲ್ದಾನಾ ಜಿಲ್ಲೆಗಳ ಶೇಕಡ 60ರಷ್ಟು ಹಳ್ಳಿಗಳು ಬರದ ದವಡೆಗೆ ಸಿಲುಕಿವೆ.

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ (ನಾಂದೇಡ್), ಸುಶೀಲ್‌ ಕುಮಾರ್ ಶಿಂಧೆ (ಸೊಲ್ಲಾಪುರ), ಪ್ರಕಾಶ್ ಅಂಬೇಡ್ಕರ್ (ಸೊಲ್ಲಾಪುರ, ಅಕೋಲಾ) ಮತ್ತು ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಢೆಯವರ ಪುತ್ರಿ ಪ್ರೀತಂ ಮುಂಢೆ (ಬೀಡ್) ಕಣದಲ್ಲಿರುವ ಪ್ರಮುಖರು.

ಉತ್ತರ ಪ್ರದೇಶದ ಬಳಿಕ 48 ಸ್ಥಾನಗಳನ್ನು ಹೊಂದಿದ ಮಹಾರಾಷ್ಟ್ರ ಅತಿಹೆಚ್ಚು ಕ್ಷೇತ್ರಗಳನ್ನು ಹೊಂದಿದ ರಾಜ್ಯವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 23 ಹಾಗೂ ಶಿವಸೇನೆ 18 ಸ್ಥಾನಗಳನ್ನು ಗೆದ್ದಿದ್ದವು. ಆರು ಸ್ಥಾನಗಳನ್ನು ಎನ್‌ಸಿಪಿ ಹಾಗೂ ಕಾಂಗ್ರೆಸ್ ಹಂಚಿಕೊಂಡಿದ್ದವು.

ಈ ಭಾಗದಲ್ಲಿ ಬರ ಹಾಗೂ ರೈತರ ಸಮಸ್ಯೆಗಳೇ ಈ ಬಾರಿಯ ಪ್ರಮುಖ ಚುನಾವಣಾ ವಿಷಯ. "ನೀರು ಹಾಗೂ ಆಹಾರ ಕೂಡಾ ಇಲ್ಲದ 1972ರ ಭೀಕರ ಬರಗಾಲವನ್ನು ನಾನು ನೋಡಿದ್ದೇನೆ. ಸದ್ಯದ ಪರಿಸ್ಥಿತಿ ಅದಕ್ಕಿಂತಲೂ ಕರಾಳ" ಎಂದು ಕಳೆದ ವಾರ ಒಸ್ಮಾನಾಬಾದ್‌ನಲ್ಲಿ ನಡೆದ ಮೋದಿ ರ್ಯಾಲಿಯಲ್ಲಿ ಪಾಲ್ಗೊಂಡ ರೈತ ಭಗವತ್ ಪವಾರ್ ಹೇಳುತ್ತಾರೆ. ಆದರೆ ತಾವು ಯಾರಿಗೆ ಮತ ಹಾಕಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸದಿರುವುದು ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ನಿಯಂತ್ರಣ ಪ್ರಾಧಿಕಾರದ ಮಾಜಿ ಸಲಹೆಗಾರ ವೈ.ಆರ್.ಜಾಧವ್ ಅಭಿಪ್ರಾಯಪಡುತ್ತಾರೆ.

ಗ್ರಾಮೀಣ ಜನತೆ ಮತ್ತು ರೈತರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಎದ್ದುಕಾಣುತ್ತಿದೆ. ಬೆಳೆಹಾನಿ, ಕನಿಷ್ಠ ಬೆಂಬಲ ಬೆಲೆ ಕೊರತೆ, ಹಣದುಬ್ಬರ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ, ಗ್ರಾಮೀಣ ಜನರ ಬದುಕನ್ನು ಕರಾಳವಾಗಿಸಿವೆ. ಇಷ್ಟಾಗಿಯೂ ಜಾತಿ ಆಧಾರದಲ್ಲಿ ಮತದಾನ ನಡೆಯುವ ಸಾಧ್ಯತೆಯೇ ಹೆಚ್ಚು ಎಂದು ಕೃಷಿ ತಜ್ಞ ವಿಜಯ್ ಜಾವಂದಿಯಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News