ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್

Update: 2019-04-18 14:38 GMT

ಬೆಂಗಳೂರು, ಎ.18: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚುನಾವಣಾ ಸಂಚಾರಿ ತಂಡ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ವಿರುದ್ಧ ದೂರು ನೀಡಿತ್ತು. ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಅನ್ವಯ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿರುವ ವಿಡಿಯೋವನ್ನು ಡಿಲೀಟ್ ಮಾಡಲು ಸೂಚಿಸಲಾಗಿದೆ. ಮತದಾನದ ದಿನ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತೇಜಸ್ವಿ ಸೂರ್ಯ ಅವರು ಮತದಾರರನ್ನು ಓಲೈಸಿದ್ದಾರೆ ಎಂಬುದು ಆರೋಪವಾಗಿದೆ. ಟ್ವಿಟರ್‌ನಲ್ಲಿರುವ ವಿಡಿಯೋವನ್ನು ಡಿಲೀಟ್ ಮಾಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಮತದಾನ ಮಾಡಿದ ಬಳಿಕ ಮತಗಟ್ಟೆಯ ಬಳಿಯೇ ತೇಜಸ್ವಿ ಸೂರ್ಯ ಒಂದು ವಿಡಿಯೋವನ್ನು ಮಾಡಿ ಟ್ವಿಟರ್‌ನಲ್ಲಿ ಹಾಕಿದ್ದಾರೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಮತದಾನ ಮಾಡಿ ಎಂದು ಅದರಲ್ಲಿ ಕರೆ ನೀಡಿದ್ದಾರೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮತ್ತೊಂದು ವಿಡಿಯೋವನ್ನು ತೇಜಸ್ವಿ ಸೂರ್ಯ ಟ್ವಿಟರ್‌ನಲ್ಲಿ ಹಾಕಿದ್ದಾರೆ. ಮತದಾನಕ್ಕೆ ಕೆಲವು ಗಂಟೆಗಳು ಬಾಕಿ ಇದೆ. ಕಾರ್ಯಕರ್ತರು ವಿಶ್ರಮಿಸಬಾರದು. ನರೇಂದ್ರ ಮೋದಿ ಅವರು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮ್ಮ ಪಕ್ಷದ ಆಸ್ತಿ ನೀವು. ಇಂದು ನಾವು ಮಿಶ್ರಮಿಸಬಾರದು. ಮನೆ-ಮನೆಗೆ ಹೋಗಿ ಯಾರು ಮತದಾನ ಮಾಡಿಲ್ಲವೋ ಅವರಿಗೆ ಮತ ಹಾಕಲು ಹೇಳಿ ಎಂದು ಕರೆ ನೀಡಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News