ಬೆಂಗಳೂರು ನಗರದಲ್ಲಿ ಶಾಂತಿಯುತ ಮತದಾನ

Update: 2019-04-18 15:02 GMT

ಬೆಂಗಳೂರು, ಎ.18: ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಅಂತಿಮಗೊಂಡಿದ್ದು, ಹಲವು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಮಾಯ ಸೇರಿದಂತೆ ಸಣ್ಣಪುಟ್ಟ ಗಲಾಟೆಗಳ ನಡುವೆ ಶಾಂತಿಯುತವಾಗಿ ಮತದಾನ ನಡೆದಿದೆ.

ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ, ಮತದಾರರ ಪಟ್ಟಿಯಿಂದ ಹೆಸರುಗಳು ಕೈ ಬಿಟ್ಟಿರುವುದು, ನಕಲಿ ಮತದಾನಕ್ಕೆ ಯತ್ನ ಸೇರಿದಂತೆ ಸಣ್ಣಪುಟ್ಟ ಘಟನೆಗಳು ನಡೆದಿದ್ದರೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಕೋರಮಂಗಲ ಈಡಬ್ಲ್ಯೂಸಿ ಕ್ವಾಟ್ರಸ್‌ನಲ್ಲಿರುವ 3 ಸಾವಿರ ಮತದಾರರ ಹೆಸರನ್ನು ಬಿಬಿಎಂಪಿ ತೆಗೆದು ಹಾಕಿದೆ. ಬಿಬಿಎಂಪಿ ಇಡಬ್ಲ್ಯೂಸಿ ಕ್ವಾಟ್ರಸ್ ನವೀಕರಣಕ್ಕಾಗಿ ನೆಲಸಮಗೊಳಿಸಿದ್ದು, ಈ ವೇಳೆ ಮತದಾರರ ಪಟ್ಟಿ ನಾಪತ್ತೆಯಾಗಿದೆ. 3 ಸಾವಿರ ಕ್ಕೂ ಅಧಿಕ ಮತದಾರರ ಹೆಸರು ಪಟ್ಟಿಯಿಂದ ತೆಗೆದುಹಾಕಿರುವುದಕ್ಕೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗರಬಾವಿ ಸಮೀಪದ ಕೆಎಲ್ಇ ಕಾಲೇಜಿನ ಬೂತ್‌ನಲ್ಲಿ ಮತದಾರರ ಪಟ್ಟಿಯಲ್ಲಿ 367 ಹೆಸರು ನಾಪತ್ತೆಯಾಗಿದ್ದು, ಮತದಾರರು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿಯ ಹೊಂಗಸಂದ್ರ ನಿವಾಸಿ ದೇವರಾಜ್ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿ ಮತ ಚಲಾಯಿಸಿದ್ದರಿಂದ ಕೆಲಕಾಲ ಮತಗಟ್ಟೆಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಡಾಲರ್ಸ್ ಕಾಲನಿಯ ಗೋಪಾಲ ನಾಗರಾಜ್ ಮತಗಟ್ಟೆಯಲ್ಲಿ ಮತದಾರರ ಫೋಟೊ ಹೊಂದಾಣಿಕೆ ಆಗುತ್ತಿಲ್ಲವೆಂದು ಅಧಿಕಾರಿಗಳು ಮತ್ತು ಮತದಾರರ ನಡುವೆ ಮಾತಿನ ಚಕಮುಕಿ ನಡೆಯಿತು.

ಇವಿಎಂನಲ್ಲಿ ತಾಂತ್ರಿಕ ದೋಷ: ಶ್ರೀರಾಮಪುರದ 69ರ ಮತಗಟ್ಟೆಯ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, 7 ಗಂಟೆಗೆ ಮತದಾನ ಆರಂಭವಾಗಲಿಲ್ಲ. ಜನರು ಉತ್ಸಾಹದಿಂದ ಮತ ಹಾಕಲು ಕಾದು ನಿಂತಿದ್ದು, ಇವಿಎಂ ತಾಂತ್ರಿಕ ದೋಷದಿಂದಾಗಿ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಇವಿಎಂ ತಾಂತ್ರಿಕ ದೋಷ ಸರಿಪಡಿಸಲು ಹರಸಾಹಸ ಪಟ್ಟರು. ಕೆಲ ಗಂಟೆಗಳ ನಂತರ ತಾಂತ್ರಿಕ ದೋಷ ಸರಿಪಡಿಸಲಾಯಿತು. ಮತದಾನ ಆರಂಭವಾಯಿತು.

ಕಣ್ಮುಚ್ಚಿ ಕುಳಿತ ಆಯೋಗ

ಮತಗಟ್ಟೆಯಿಂದ 100 ಮೀ. ಒಳಗೆ ಪ್ರಚಾರ ನಡೆಸುವಂತಿಲ್ಲ ಮತ್ತು 200 ಮೀ. ಒಳಗೆ ಪಕ್ಷದ ಏಜೆಂಟರು 1 ಟೇಬಲ್ ಮತ್ತು 2 ಕುರ್ಚಿಗಳನ್ನು ಮಾತ್ರ ಬಳಸಬೇಕೆಂದು ಆಯೋಗ ತಿಳಿಸಿದೆ. ಆದರೂ, ಚಾಮರಾಜಪೇಟೆಯ ವಿಧಾನಸಭಾ ಕ್ಷೇತ್ರದ ಕರಿತಿಮ್ಮನಹಳ್ಳಿ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸೇರಿದಂತೆ ಸುತ್ತಲಿನ ಮತಗಟ್ಟೆಗಳಲ್ಲಿ ಏಜೆಂಟರು 4ಕ್ಕೂ ಅಧಿಕ ಟೇಬಲ್ ಹಾಕಿಕೊಂಡಿದ್ದು ಕಂಡು ಬಂದಿತು. 

ಮತ ಚಲಾಯಿಸುವುದರಿಂದ ಉತ್ತಮ ನಾಯಕನ ಆಯ್ಕೆ ಸಾಧ್ಯ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆ ಇದ್ದು, ಹೆಚ್ಚಾಗಬೇಕು.

-ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕ

ನಾನು ಪರವಾಗಿಯೂ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಎರಡು ವರ್ಷದ ಹಿಂದೆಯೇ ತಿಳಿಸಿದ್ದೆ. ಪ್ರೀತಿ ವಿಶ್ವಾಸ ಮುಖ್ಯ. ಮತದಾರರು ಕೂಡ ಪ್ರೀತಿ ವಿಶ್ವಾಸದಿಂದ ಮತ ಚಲಾಯಿಸುತ್ತಾರೆ. ಅಭ್ಯರ್ಥಿಗಳು ಕೆಲಸ ಮಾಡದಿದ್ದರೆ ನಾವು ಜವಬ್ದಾರರಾಗಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಅಭ್ಯರ್ಥಿಗೆ ಬೆಂಬಲವಿಲ್ಲ ಅಂತಲ್ಲ.

-ಸುದೀಪ್, ಚಲನಚಿತ್ರ ನಟ

ನಮ್ಮ ಕರ್ತವ್ಯಗಳನ್ನು ನಾವು ಮಾಡಬೇಕು. ನಮ್ಮ ಕರ್ತವ್ಯ ಮಾಡದೇ ಬೇರೆಯವರಿಗೆ ಕೈ ತೋರಿಸಬಾರದು. ಯಾರಿಗೂ ತೊಂದರೆಯಾಗಬಾರದೆಂದು ಮಧ್ಯಾಹ್ನ ಸಮಯದಲ್ಲಿ ಮತದಾನ ಮಾಡಿದ್ದೇನೆ. ಎರಡನೇ ಹಂತದಲ್ಲಿ ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗಲ್ಲ. ಮುಂದಿನ ದಿನಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತೇನೆ.

-ಯಶ್, ಚಲನಚಿತ್ರ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News